ಪತ್ನಿ ಸರ್ಕಾರಿ ಉದ್ಯೋಗ ಗಳಿಸಿದಳೆಂಬ ಅಸೂಯೆ: ಮಹಿಳೆಯ ಕೈಯನ್ನೇ ಕತ್ತರಿಸಿದ ವಿಕೃತ ಪತಿ

  • ಸರ್ಕಾರಿ ಆಸ್ಪತ್ರೆಯಲ್ಲಿ ಶುಶ್ರೂಷಕಿ ಉದ್ಯೋಗ ಪಡೆದಿದ್ದ ಮಹಿಳೆ
  • ಪತ್ನಿ ಎದುರು ತಾನೇ ಕಡಿಮೆ ಎಂಬ ಕೀಳರಿಮೆ ಹೊಂದಿದ್ದ ನಿರುದ್ಯೋಗಿ ಪತಿ

ವಿಕೃತ ಮನಸ್ಸಿನ ಪತಿಯೊಂಬ ತನ್ನ ಪತ್ನಿ ಸರ್ಕಾರಿ ಉದ್ಯೋಗಕ್ಕೆ ತೆರಳುವುದನ್ನು ತಡೆಯಲು ಆಕೆಯ ಕೈಗಳನ್ನೇ ಕತ್ತರಿಸಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ ಜಿಲ್ಲೆಯಲ್ಲಿ ನಡೆದಿದೆ. 

ಸಂತ್ರಸ್ಥೆ ರೇಣು ಖಾತುನ್‌ಗೆ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಕಿಯಾಗಿ ಉದ್ಯೋಗ ಲಭಿಸಿತ್ತು. ನಿರುದ್ಯೋಗಿಯಾಗಿದ್ದ ಸರಿಫುಲ್‌ ಶೇಖ್‌, ತನ್ನ ಅನುಮತಿಯಿಲ್ಲದೇ ಸರ್ಕಾರಿ ಉದ್ಯೋಗ ಪಡೆದ ರೇಣು ಮೇಲೆ ಅಸೂಯೆ ಬೆಳೆಸಿಕೊಂಡಿದ್ದಾನೆ. ಪತ್ನಿ ಎದುರು ಉದ್ಯೋಗವಿಲ್ಲದ ತಾನೂ ಕೀಳೆಂಬ ಕೀಳರಿಮೆಯಿಂದ ಆಕೆಯ ಕೈಗಳನ್ನು ಕತ್ತರಿಸಿ, ವಿಕೃತಿ ಮೆರೆದಿದ್ದಾನೆ. 

Eedina App

ಹೆಂಡತಿಯ ಮೇಲೆ ದೈಹಿಕವಾಗಿ ದಾಳಿ ಮಾಡಿದ್ದ ಆರೋಪಿಯೇ, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ಮತ್ತೆ ಎಲ್ಲಿ ಕೈಗಳನ್ನು ಜೋಡಿಸುತ್ತಾರೋ ಎಂಬ ಭಯದಿಂದ ತುಂಡಾದ ಕೈಗಳನ್ನು ಮನೆಯಲ್ಲಿಯೇ ಬಿಟ್ಟುಹೋಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರೇಣು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಸಂತ್ರಸ್ತೆಯ ತಂದೆ ನೀಡಿರುವ ದೂರಿನ ಆಧಾರದ ಮೇಲೆ ಸರಿಫುಲ್ ಶೇಖ್ ಮತ್ತು ಆತನ ಕುಟುಂಬದ ಸದಸ್ಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರಿಸಿಕೊಂಡಿದ್ದಾರೆ.

AV Eye Hospital ad

ʻʻಆರೋಪಿ ಮತ್ತವರ ಕುಟುಂಬದವರು ತಲೆ ಮರೆಸಿಕೊಂಡಿದ್ದಾರೆ. ಸರಿಫುಲ್ ಮತ್ತು ಆತನ ಕುಟುಂಬದವರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 307 (ಕೊಲೆಗೆ ಯತ್ನ), 506 (ಕ್ರಿಮಿನಲ್ ಬೆದರಿಕೆ), 323 (ಸ್ವಯಂಪ್ರೇರಿತವಾಗಿ ಹರಿತವಾದ ಆಯುಧಗಳಿಂದ ಗಾಯಗೊಳಿಸುವುದು) ಮತ್ತು 326, 498 ಎ (ಕೌಟುಂಬಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ರೇಣು ಖಾತುನ್, ದುರ್ಗಾಪುರದ ಕೈಗಾರಿಕಾ ಟೌನ್‌ಶಿಪ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಹಾಯಕ ಶುಶ್ರೋಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೆ ಸರ್ಕಾರಿ ಉದ್ಯೋಗಕ್ಕೆ ಸೇರುವಂತೆ ನೇಮಕಾತಿ ಪತ್ರ ಸಂತ್ರಸ್ಥೆಗೆ ತಲುಪಿತ್ತು. ಹೆಂಡತಿಗೆ ಸರ್ಕಾರಿ ಉದ್ಯೋಗ ಲಭಿಸಿದೆ ಎಂದು ಅಸೂಯೆ ಮತ್ತು ಕೀಳಿರಿಮೆಯಿಂದ ಬಳಲುತ್ತಿದ್ದ ಆರೋಪಿಯೂ ಕೆಲಸಕ್ಕೆ ಸೇರದಂತೆ ರೇಣು ಅವರನ್ನು ಪೀಡಿಸುತ್ತಿದ್ದ.

"ನಿರುದ್ಯೋಗಿಯಾಗಿದ್ದ ಸರಿಫುಲ್, ಸರ್ಕಾರಿ ನೌಕರಿ ಸಿಕ್ಕ ನಂತರ ಪತ್ನಿ ತನ್ನನ್ನು ತೊರೆದುಹೋಗುತ್ತಾಳೆ ಎಂಬ ಭಯ ಹೊಂದಿದ್ದನು. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಉದ್ಯೋಗವನ್ನು ನಿರಾಕರಿಸುವಂತೆ ಸರಿಫುಲ್ ಒತ್ತಾಯಿಸುತ್ತದ್ದ. ಆದರೆ ರೇಣು ಇದಕ್ಕೆ ಒಪ್ಪಿರಲಿಲ್ಲ" ಎಂದು ಆತನ ಮನೆಯ ನೆರೆಹೊರೆಯವರು ಹೇಳಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಶಸ್ತ್ರಚಿಕಿತ್ಸೆಯ ಮೂಲಕ ಮೆದುಳಿನ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾದ ವೈದ್ಯರು

ʻʻರೇಣು ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಪಡೆದಾಗಿನಿಂದ ಸರಿಫುಲ್ ಈ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಒತ್ತಾಯಿಸುತ್ತಿದ್ದರು. ಶುಶ್ರೂಷೆ ವೃತ್ತಿಯನ್ನು ಮುಂದುವರೆಸುವ ಕನಸು ಕಾಣುತ್ತಿದ್ದ ನನ್ನ ತಂಗಿ ಪತಿಯ ಮಾತನ್ನು ನಿರಾಕರಿಸಿದಳು. ಆದರೆ ಆತನಲ್ಲಿದ್ದ ಅಭದ್ರತೆಯ ಭಾವನೆ ಇಂತಹ ದುರಂತ ತಿರುವು ಪಡೆಯುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಮುಂದೆ ಎಂದೆಂದೂ ನನ್ನ ತಂಗಿ ನರ್ಸ್‌ ಆಗಿ ಕೆಲಸ ಮಾಡಬಾರದು ಎಂಬ ದುರಾಲೋಚನೆಯಿಂದ ಆರೋಪಿಯು ಅವಳ ಕೈ ಕತ್ತರಿಸಿದ್ದಾನೆʼʼ ಎಂದು ಸಂತ್ರಸ್ಥೆಯ ಸಹೋದರ ರಿಪನ್ ಶೇಖ್ ತಿಳಿಸಿದ್ದಾರೆ.

ಭಾನುವಾರ ರಾತ್ರಿ ರೇಣು ಮಲಗಿದ್ದ ಸಮಯದಲ್ಲಿ ಹರಿತವಾದ ಆಯುಧದಿಂದ ಸರಿಫುಲ್ ಮತ್ತವರ ಕುಟುಂಬದ ಸದಸ್ಯರು ಅವಳ ಕೈ ಮಣಿಕಟ್ಟನ್ನು ಕತ್ತರಿಸಿದ್ದಾರೆ. ಅವಳು ಕಿರುಚದಂತೆ ಬಾಯಿಗೆ ದಿಂಬನ್ನು ಒತ್ತಿ ಹಿಡಿದಿದ್ದಾರೆ.

ʻʻನರ್ಸ್‌ ಆಗಿ ಕೆಲಸ ಮಾಡುವ ಮೂಲಕ ಸಮಾಜ ಸೇವೆ ಮಾಡುವುದು ನನ್ನ ಮಗಳ ಕನಸಾಗಿತ್ತು. ಅವಳ ಕನಸು ಇಂದು ಭಗ್ನವಾಗಿವೆ. ಅವಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಸಿಕ್ಕಂದಿನಿಂದ ಅವಳ ಪತಿ ಅವಳನ್ನು ನರ್ಸ್‌ ಆಗಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದʼʼ ಎಂದು ಆಕೆಯ ತಂದೆ ಅಜಿಜುಲ್ ಹಕ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ʻಐರನ್‌ಮ್ಯಾನ್‌ ಟ್ರಯಾಥ್ಲಾನ್ʼ ಪೂರ್ತಿಗೊಳಿಸಿದ ಕನ್ನಡಿಗ ಶ್ರೇಯಸ್ ಹೊಸೂರು

ನಿಮಗೆ ಏನು ಅನ್ನಿಸ್ತು?
2 ವೋಟ್
eedina app