
- ಯುರೋಪ್ನಲ್ಲಿ ಕೋಟ್ಯಂತರ ಮಂದಿ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ
- ಅಕ್ಟೋಬರ್ ತಿಂಗಳಿನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಶೇ. 8ರಷ್ಟು ಏರಿಕೆ
ಯುರೋಪ್ನಾದ್ಯಂತ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕೋವಿಡ್ ಸೋಂಕಿನ ಮತ್ತೊಂದು ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆ್ಯಂಡ್ ಕಂಟ್ರೋಲ್ (ಇಸಿಡಿಸಿ) ಎಚ್ಚರಿಸಿದೆ.
2019ರಲ್ಲಿ ಇದ್ದಂತಹ ಪರಿಸ್ಥಿತಿಯಲ್ಲಿ ಈಗ ನಾವು ಇಲ್ಲದಿದ್ದರೂ, ಕೋವಿಡ್ ಸಂಪೂರ್ಣ ನಾಶವಾಗಿಲ್ಲ. ಯಾವ ದೇಶಗಳು ಕೂಡ ಸಾಂಕ್ರಾಮಿಕದಿಂದ ಮುಕ್ತಿ ಹೊಂದಿಲ್ಲ ಎನ್ನುವುದು ಏರುತ್ತಿರುವ ಕೋವಿಡ್ ಪ್ರಕರಣಗಳಿಂದ ಸ್ಪಷ್ಟವಾಗಿದೆ. ದುರದೃಷ್ಟವಶಾತ್ ಯುರೋಪ್ನಲ್ಲಿ ಮತ್ತೆ ಸೋಂಕು ಉಲ್ಬಣಗೊಳ್ಳುವ ಲಕ್ಷಣಗಳು ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಮತ್ತು ಇಸಿಡಿಸಿಯ ನಿರ್ದೇಶಕಿ ಆ್ಯಂಡ್ರಿಯಾ ಅಮನ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಷ್ಯಾ- ಉಕ್ರೇನ್ ಯುದ್ಧ | ಅಣ್ವಸ್ತ್ರ ಬಳಸಿದಲ್ಲಿ ಪರಿಣಾಮ ಎದುರಿಸಬೇಕು; ರಷ್ಯಾಗೆ ಜಿ7 ರಾಷ್ಟ್ರಗಳ ಎಚ್ಚರಿಕೆ
ಕಳೆದ ತಿಂಗಳಿಗೆ ಹೋಲಿಸಿದರೆ ಯುರೋಪ್ನಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಶೇ. 8 ಹೆಚ್ಚಳವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುರೋಪ್ನಲ್ಲಿ ಕೋಟ್ಯಂತರ ಮಂದಿ ಇನ್ನೂ ಕೋವಿಡ್ ಲಸಿಕೆ ಪಡೆದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಶೀತ ಮತ್ತು ಜ್ವರದ ಲಕ್ಷಣಗಳು ಕಂಡುಬರುವ ಮೊದಲೇ ಫ್ಲೂ ಮತ್ತು ಕೋವಿಡ್ ಲಸಿಕೆ ಹಾಕುವಂತೆ ಯುರೋಪಿಯನ್ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ.
60ಕ್ಕಿಂತ ಹೆಚ್ಚಿನ ವಯಸ್ಸಿನವರು, ಗರ್ಭಿಣಿ ಮಹಿಳೆಯರು ಹಾಗೂ ಬೇರೆ ಕಾಯಿಲೆ ಇರುವವರು ಸಾಂಕ್ರಾಮಿಕ ಶೀತಜ್ವರ ಹಾಗೂ ಕೋವಿಡ್ ಲಸಿಕೆ ಪಡೆಯಲೇಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಚೀನಾದಲ್ಲಿ ಲಾಕ್ಡೌನ್
ಕಳೆದ ವಾರ ಚೀನಾದಲ್ಲಿ ಸಾಲು ಸಾಲು ರಜೆಗಳಿದ್ದ ಹಿನ್ನೆಲೆಯಲ್ಲಿ ಶಾಂಕ್ಸಿ ಪ್ರಾಂತ್ಯದ ಫೆನ್ಯಂಗ್ ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 12 ದಿನಗಳಲ್ಲಿ 2,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಿರಿಂದ. ಫೆನ್ಯಂಗ್ ಮತ್ತು ಶಾಂಕ್ಸಿ ನಗರಗಳಲ್ಲಿ ಲಾಕ್ಡೌನ್ ಹೇರಲಾಗಿದೆ. ಫೆನ್ಯಂಗ್ ಮತ್ತು ಶಾಂಕ್ಸಿ ಪ್ರದೇಶಗಳಲ್ಲಿ ಪ್ರವಾಸಕ್ಕೂ ನಿರ್ಬಂಧ ವಿಧಿಸಲಾಗಿದೆ.