ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ; ನಮಗೇನು ಗೊತ್ತಿಲ್ಲ ಎಂದ ಅಮೆರಿಕ

  • ಸಾಕ್ಷ್ಯಚಿತ್ರದ ವಿಷಯದಲ್ಲಿ ಇಂಗ್ಲೆಂಡ್‌ ಪ್ರಧಾನಿ ಸುನಕ್ ಮೋದಿ ಪರ
  • ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರದ ವಿಷಯದಲ್ಲಿ ಅಮೆರಿಕ ಮೌನ

ಪಾಕಿಸ್ತಾನದ ಪತ್ರಕರ್ತನ ಬಿಬಿಸಿ ಸಾಕ್ಷ್ಯಚಿತ್ರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಮೆರಿಕ ರಾಜ್ಯ ಇಲಾಖೆ ವಕ್ತಾರ ನೆಡ್‌ ಪ್ರೈಸ್‌ ಅವರು ಸಾಕ್ಷ್ಯಚಿತ್ರದ ಕುರಿತು ನಮಗೇನು ಗೊತ್ತಿಲ್ಲ ಎಂದಿದ್ದಾರೆ.

ಬಿಬಿಸಿ ನಿರ್ಮಾಣದ ಸಾಕ್ಷ್ಯಚಿತ್ರ 'ಇಂಡಿಯಾ: ದಿ ಮೋದಿ ಕ್ವೆಶ್ಚನ್‌' ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಸದ್ದು ಮಾಡುತ್ತಿದೆ. 2002ರ ಗೋದ್ರಾ ಹತ್ಯಾಕಾಂಡದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಕುರಿತು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿತ್ತು. ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ಭಾರತದಲ್ಲಿ ನಿರ್ಬಂಧಿಸಿದೆ.

ಸೋಮವಾರ ವಾಷಿಂಗ್ಟನ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನೆಡ್ ಪ್ರೈಸ್, "ಅಮೆರಿಕ ಮತ್ತು ಭಾರತ ಪ್ರಜಾಪ್ರಭುತ್ವಗಳ ಸಾಮಾನ್ಯ ಮೌಲ್ಯಗಳನ್ನು ಆಧರಿಸಿದ ಸಹಭಾಗಿತ್ವದಲ್ಲಿ ಮುಂದುವರಿಯುತ್ತಿವೆ. ನೀವು ಹೇಳುತ್ತಿರುವ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ನಮಗೇನು ಗೊತ್ತಿಲ್ಲ. ಅಮೆರಿಕ ಮತ್ತು ಭಾರತ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಅಭಿವೃದ್ಧಿಯ ಉದ್ದೇಶದಿಂದ ಪರಸ್ಪರ ಸಂಪರ್ಕಿಸಬೇಕಾದ ಮೌಲ್ಯಗಳ ಕಡೆಗಷ್ಟೇ ಗಮನ ಕೊಡುತ್ತವೆ" ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಕರಣ | ಸುಳ್ಳು ಹೇಳುತ್ತಿರುವವರು ಯಾರು; ಪ್ರಧಾನಿ ಮೋದಿಗೆ ಪ್ರಕಾಶ್‌ ರೈ ಪ್ರಶ್ನೆ

"ನಾವು ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಹೊಂದಿದ್ದೇವೆ. ನಮ್ಮ ನಡುವೆ ಉತ್ತಮ ರಾಜಕೀಯ ಸಂಬಂಧವಿದೆ, ಆರ್ಥಿಕ ಸಂಬಂಧಗಳಿವೆ. ಇದರ ಹೊರತಾಗಿಯೂ ಎರಡು ರಾಷ್ಟ್ರಗಳ ಪ್ರಜೆಗಳ ನಡುವೆ ನಿಕಟ ಸಂಬಂಧಗಳಿವೆ" ಎಂದು ಹೇಳುವ ಮೂಲಕ ಬಿಬಿಸಿ ಸಾಕ್ಷ್ಯಚಿತ್ರದಿಂದ ಜೋ ಬೈಡನ್‌ ಸರ್ಕಾರ ದೂರವಿರಲು ನಿರ್ಧರಿಸಿದೆ.

ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರು ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸ್ಪಷ್ಟವಾದ ನಿಲುವು ಬಹಿರಂಗಪಡಿಸಿಲ್ಲ, ಈ ಬಗ್ಗೆ ಈಗಾಗಲೇ ಬ್ರಿಟನ್ ಪ್ರತಿಕ್ರಿಯಿಸಿದೆ ಎಂದು ನುಣುಚಿಕೊಂಡಿದ್ದಾರೆ. ಇದೀಗ, ಅಮೆರಿಕ ರಾಜ್ಯ ಇಲಾಖೆಯ ವಕ್ತಾರ, "ನಮಗೆ ಅದರ ಬಗ್ಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.

ತನಿಖಾ‌ ವರದಿ ಆಧಾರಿತ ಆ ಸಾಕ್ಷ್ಯಚಿತ್ರ 2002ರ ಗುಜರಾತ್‌ ಹತ್ಯಾಕಾಂಡದ ಕುರಿತು ಹಲವು ಮಹತ್ವದ ಮಾಹಿತಿಯನ್ನು ಒಳಗೊಂಡಿತ್ತು. "2002ರ ಗೋಧ್ರಾ ಘಟನೆಯ ಬಳಿಕದ ಗುಜರಾತ್ ಹತ್ಯಾಕಾಂಡಕ್ಕೆ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ನೇರ ಹೋಣೆ" ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿತ್ತು. 

ಬಿಬಿಸಿ 2002ರ ಗುಜರಾತ್ ಹತ್ಯಾಕಾಂಡದ ಕುರಿತು ತನಿಖೆ ನಡೆಸಲು ತಂಡವೊಂದನ್ನು ಭಾರತಕ್ಕೆ ಕಳುಹಿಸಿತ್ತು. ಆ ತನಿಖಾ ವರದಿ ಆಧಾರದ ಮೇಲೆ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿತ್ತು. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app