
- ರಾಜೀನಾಮೆ ಪಡೆಯುವಂತೆ ರಿಷಿ ಸುನಕ್ ಅವರ ಮೇಲೆ ಒತ್ತಡ ಹೆಚ್ಚಿತ್ತು
- ಉದ್ಯೋಗಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪವನ್ನು ಎದುರಿಸುತ್ತಿದ್ದ ಗೆವಿನ್
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಆಪ್ತರಾದ ಸರ್ ಗೆವಿನ್ ಮಿಲಿಯಮ್ಸ್ನ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ತಮ್ಮ ಸಹೋದ್ಯೋಗಿಗಳು ಮತ್ತು ಸರ್ಕಾರಿ ಉದ್ಯೋಗಿಗಳೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪವನ್ನು ಗೆವಿನ್ ಎದುರಿಸುತ್ತಿದ್ದರು. ಸರ್ ಗೆವಿನ್ ಮಿಲಿಯಮ್ಸ್ನ್ ಅವರನ್ನು ಸಚಿವ ಸಂಪುಟಕ್ಕೆ ನೇಮಿಸಿದ ರಿಷಿ ಸುನಕ್ ಅವರ ಮೇಲೆ ಪ್ರತಿಪಕ್ಷಗಳು ಕೆಂಡಕಾರಿದ್ದವು.
ಈ ಸುದ್ದಿ ಓದಿದ್ದೀರಾ? ಬ್ರಿಟನ್ | ರಿಷಿ ಸುನಕ್ ಮೊದಲ ಬಜೆಟ್ ಮಂಡನೆ; ಕಠಿಣ ಕ್ರಮ ಕೈಗೊಳ್ಳುವ ನಿರೀಕ್ಷೆ
ರಾಜೀನಾಮೆ ಪಡೆಯುವಂತೆ ರಿಷಿ ಸುನಕ್ ಅವರ ಮೇಲೆ ಒತ್ತಡ ಹೆಚ್ಚಿತ್ತು. ಸಂಪುಟಕ್ಕೆ ನೇಮಕವಾದ ಕೆಲವು ದಿನಗಳಲ್ಲೇ ಸಚಿವರೊಬ್ಬರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಿಷಿ ಸುನಕ್ ಅವರ ನಾಯಕತ್ವವನ್ನು ಪ್ರತಿಪಕ್ಷಗಳು ಟೀಕಿಸಿವೆ. “ಕಳಪೆ ನಾಯಕತ್ವದ ಸಂಕೇತ’ ಎಂದು ಲೇಬರ್ ಪಕ್ಷದ ನಾಯಕ ಸರ್ ಕೀರ್ ಸ್ಟಾಮರ್ ದೂರಿದ್ದಾರೆ.
ಬ್ರಿಟನ್ ಆರ್ಥಿಕ ಬಿಕ್ಕಟ್ಟು ಒಪ್ಪಿಕೊಂಡಿದ್ದ ನೂತನ ಪ್ರಧಾನಿ
ಬ್ರಿಟನ್ನ ಪ್ರಧಾನಿಯಾಗಿ ನೇಮಕಗೊಂಡ ನಂತರ ತಮ್ಮ ಮೊದಲ ಭಾಷಣದಲ್ಲಿ ರಿಷಿ ಸುನಕ್, "ಪ್ರಸ್ತುತ ನಮ್ಮ ದೇಶವು ಆಳವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಉಕ್ರೇನ್ ಮೇಲೆ ಪುಟಿನ್ ನಡೆಸುತ್ತಿರುವ ಯುದ್ಧವು ಪ್ರಪಂಚದಾದ್ಯಂತದ ಮಾರುಕಟ್ಟೆಗಳನ್ನು ಅಸ್ಥಿರಗೊಳಿಸಿದೆ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಈ ಕ್ಷಣದಿಂದಲೇ ಪ್ರಧಾನಿಯಾಗಿ ನಿರ್ಧಾರ ಕೈಗೊಳ್ಳುವೆ" ಎಂದು ಹೇಳಿದ್ದರು.
"ಮಾಜಿ ಪ್ರಧಾನಿ ಲಿಜ್ ಟ್ರಸ್ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸುವ ಸಲುವಾಗಿ ಕೆಲ ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದರು. ನಾನು ಅವರನ್ನು ಮೆಚ್ಚುತ್ತೇನೆ. ಆದರೆ ಉದ್ದೇಶಪೂರ್ವಕವಲ್ಲದ ಕೆಲವು ತಪ್ಪುಗಳು ಆಗಿವೆ. ವಾಸ್ತವವಾಗಿ ಆ ತಪ್ಪುಗಳನ್ನು ಸರಿಪಡಿಸಬೇಕಿದೆ" ಎಂದು ಪ್ರಧಾನಿಯಾದ ಬಳಿಕ ಮೊದಲ ಭಾಷಣದಲ್ಲಿ ಸುನಕ್ ಹೇಳಿದ್ದರು.