
- ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಬಡರಾಷ್ಟ್ರಗಳಿಗೆ ಸಹಾಯ
- ಈಜಿಪ್ತ್ನಲ್ಲಿ ನವೆಂಬರ್ 6 ಭಾನುವಾರದಂದು ಆರಂಭವಾದ ಶೃಂಗಸಭೆ
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ 27ನೇ ಶೃಂಗಸಭೆಯಲ್ಲಿ (ಸಿಒಪಿ27) ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ಹೆಚ್ಚು ಪರಿಣಾಮವಾಗುತ್ತಿರುವ ಬಡರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ಪರಿಹಾರ ನೀಡುವ ಸಂಬಂಧ ಚರ್ಚಿಸಲು ಎಲ್ಲ ಪ್ರತಿನಿಧಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಈಜಿಪ್ತ್ ಶೃಂಗ ಸಭೆಯಲ್ಲಿ ಭಾಗವಹಿಸಲು 40 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿದ್ದಾರೆ. 120ಕ್ಕೂ ಹೆಚ್ಚು ವಿಶ್ವ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾಗವಹಿಸುವ ನಿರೀಕ್ಷೆ ಇದೆ ಎಂದು ಈಜಿಪ್ತ್ ಹೇಳಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಸೇರಿ ಅನೇಕ ಉನ್ನತ ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿಲ್ಲ.
ಈಜಿಪ್ತ್ನಲ್ಲಿ ನವೆಂಬರ್ 6 ಭಾನುವಾರದಂದು ಆರಂಭವಾದ ಶೃಂಗಸಭೆ ನ. 18ರವರೆಗೆ ನಡೆಯಲಿದ್ದು, ಉಕ್ರೇನ್ ಯುದ್ಧ, ಹಣದುಬ್ಬರ ಏರಿಕೆ, ಆಹಾರ ಕೊರತೆ ಹಾಗೂ ಇಂಧನ ಬಿಕ್ಕಟ್ಟು ಸೇರಿದಂತೆ ಜಗತ್ತನ್ನು ಬಾಧಿಸುತ್ತಿರುವ ವಿಚಾರಗಳ ಕುರಿತು ಜಾಗತಿಕ ನಾಯಕರು ಚರ್ಚಿಸಲಿದ್ದಾರೆ.
ತಾಪಮಾನ ಏರಿಕೆ ಪರಿಣಾಮಗಳನ್ನು ನಿಭಾಯಿಸಲು ದಾರಿ ಕಂಡುಕೊಳ್ಳದಿದ್ದರೆ ಮತ್ತು ಮಾಲಿನ್ಯ ಹೊರಸೂಸುವಿಕೆ ನಿಯಂತ್ರಿಸಲು ಬಡರಾಷ್ಟ್ರಗಳಿಗೆ ಸಹಾಯ ಮಾಡಲು ಪರಿಹಾರ ಮಾರ್ಗ ಕಂಡುಕೊಳ್ಳದ ಹೊರತು ಭೂಮಿ ಸರಿಪಡಿಸಲಾಗದಷ್ಟು ಹವಾಮಾನ ದುಷ್ಟಪರಿಣಾಮಗಳಿಗೆ ಒಳಗಾಗಲಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಎಂದು ಕಳೆದ ವಾರ ಹೇಳಿದ್ದರು.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದಾದ ನಷ್ಟ, ಸರಿಪಡಿಸುವತ್ತ ಗಮನಹರಿಸುವುದು, ಅಗತ್ಯ ಹಣಕಾಸು ನೆರವು ವ್ಯವಸ್ಥೆ ಮಾಡಿಕೊಳ್ಳುವ ಸಂಬಂಧದ ಪ್ರಸ್ತಾವನೆ ಕುರಿತು ಚರ್ಚಿಸುವ ಪ್ರಮುಖ ಕಾರ್ಯಸೂಚಿಗೆ ರಾಜತಾಂತ್ರಿಕರು ಅನುಮೋದನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಿಂದೂ ಮಹಾಸಾಗರದಲ್ಲಿ ಚೀನಾದ ಗುಪ್ತಚರ ಹಡಗು; ಭಾರತದ ಕ್ಷಿಪಣಿ ಪರೀಕ್ಷೆಗೆ ಅಡ್ಡಿಯಾಗುವ ಆತಂಕ
"ಶ್ರೀಮಂತ ರಾಷ್ಟ್ರಗಳ ಮಾಲಿನ್ಯ ಹೊರಸೂಸುವಿಕೆಯಿಂದ ಉಂಟಾಗುವ ಹವಾಮಾನ ಬದಲಾವಣೆಯಿಂದಾಗುವ ನಷ್ಟಗಳಿಗೆ ಪರಿಹಾರದ ಜತೆಗೆ ಬಡ ದೇಶಗಳಿಗೆ ಸಹಾಯ ಮಾಡುವಲ್ಲಿ ಒಗ್ಗಟ್ಟನ್ನು ತೋರಿಸಲು ಜರ್ಮನಿ ಸಿದ್ಧ" ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ತಿಳಿಸಿದರು.