
- ಬ್ರಿಟನ್ನ ನೂತನ ರಾಜ ಚಾಲ್ಸ್ರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ತೆಗೆಯಲು ಜನಾಭಿಪ್ರಾಯ
- 100,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಆಂಟಿಗುವಾ ಮತ್ತು ಬಾರ್ಬುಡಾ ನಿರ್ಧಾರ
ಬ್ರಿಟನ್ನ ಎರಡನೇ ರಾಣಿ ಎಲಿಝಬೆತ್ ನಿಧನರಾಗುತ್ತಿದ್ದಂತೆಯೇ ಮುಂದಿನ ರಾಜನಾಗಿ ಆಯ್ಕೆಯಾದ 'ಚಾರ್ಲ್ಸ್ ನಮ್ಮ ರಾಜನಲ್ಲ' ಎಂದು ಘೋಷಿಸಿ, ಗಣರಾಜ್ಯಕ್ಕೆ ಸಿದ್ಧವಾಗಲು ಕಾಮನ್ವೆಲ್ತ್ ದ್ವೀಪ ರಾಷ್ಟ್ರಗಳು ಸಜ್ಜಾಗಿವೆ.
ಆಂಟಿಗುವಾ ಮತ್ತು ಬಾರ್ಬುಡಾ ಮುಂದಿನ ಮೂರು ವರ್ಷಗಳಲ್ಲಿ ಗಣರಾಜ್ಯವಾಗಲು ಜನಾಭಿಪ್ರಾಯ ಸಂಗ್ರಹಿಸಲು ಯೋಜಿಸಿದ್ದು, 'ಚಾರ್ಲ್ಸ್ ಮುಂದೆ ನಮ್ಮ ರಾಜನಲ್ಲ' ಎಂದು ಘೋಷಿಸಿ, ಗಣರಾಜ್ಯಕ್ಕೆ ಸಿದ್ಧವಾಗುವುದಾಗಿ ಕೆರಿಬಿಯನ್ ರಾಷ್ಟ್ರದ ಪ್ರಧಾನಮಂತ್ರಿ ಗ್ಯಾಸ್ಟನ್ ಬ್ರೌನ್ ಬ್ರಿಟಿಷ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಆಂಟಿಗುವಾ ಮತ್ತು ಬಾರ್ಬುಡಾ ರಾಷ್ಟ್ರದ ಮುಖ್ಯಸ್ಥನ ಸ್ಥಾನದಿಂದ ಬ್ರಿಟನ್ನ ನೂತನ ರಾಜ ಚಾಲ್ಸ್ ಅವರನ್ನು ತೆಗೆದುಹಾಕಬಹುದು ಎಂದು ವರದಿಯಾಗಿದೆ.
"ಇದು ಜನಾಭಿಪ್ರಾಯ ಸಂಗ್ರಹಣೆ ನಂತರ ತೆಗೆದುಕೊಳ್ಳಬೇಕಾದ ನಿರ್ಧಾರ" ಎಂದು ಪ್ರಧಾನ ಮಂತ್ರಿ ಗ್ಯಾಸ್ಟನ್ ಬ್ರೌನ್ ಹೇಳಿಕೆ ಉಲ್ಲೇಖಿಸಿ 'ಐಟಿವಿ ನ್ಯೂಸ್' ವರದಿ ಮಾಡಿದೆ.
"ನಾವು ನಿಜವಾಗಿಯೂ ಸಾರ್ವಭೌಮ ರಾಷ್ಟ್ರವೆಂದು ದೃಢವಾಗಿ ನಿಲ್ಲಲು ಗಣರಾಜ್ಯವಾಗಿ ಬದಲಾಗುವುದು ಅಂತಿಮ ಹಂತ. ಆದರೆ ಜನಾಭಿಪ್ರಾಯ ಸಂಗ್ರಹವು ಹಗೆತನದ ಕ್ರಿಯೆಯಲ್ಲ ಮತ್ತು ಕಾಮನ್ವೆಲ್ತ್ ಸದಸ್ಯತ್ವದಿಂದ ಹಿಂದೆ ಸರಿಯುವುದೂ ಇಲ್ಲ" ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಣಿ ಎರಡನೇ ಎಲಿಝಬೆತ್ ಸಾವು | ಅರಮನೆಯಲ್ಲಿರುವ ಜೇನ್ನೊಣಗಳಿಗೆ ರಾಣಿಯ ಸಾವಿನ ಸುದ್ದಿ
ಕಾಮನ್ವೆಲ್ತ್ ಸದಸ್ಯ ದ್ವೀಪಗಳು
1981ರಲ್ಲಿ ಬ್ರಿಟನ್ನಿಂದ ಸ್ವತಂತ್ರವಾದ ಸಣ್ಣ ಕೆರಿಬಿಯನ್ ದ್ವೀಪ ರಾಷ್ಟ್ರವಾದ ಆಂಟಿಗುವಾ ಮತ್ತು ಬಾರ್ಬುಡಾ ಬ್ರಿಟನ್ ರಾಜನನ್ನೇ ತಮ್ಮ ರಾಷ್ಟ್ರದ ಅಧ್ಯಕ್ಷರಾಗಿ ಒಪ್ಪಿಕೊಂಡಿರುವ 14 ಕಾಮನ್ವೆಲ್ತ್ ಸದಸ್ಯರಲ್ಲಿ ಒಂದಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಆಂಟಿಗುವಾ ಮತ್ತು ಬಾರ್ಬುಡಾ 100,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕಳೆದ ವರ್ಷ ಬ್ರಿಟನ್ ರಾಜಪ್ರಭುತ್ವ ತ್ಯಜಿಸಿ ರಿಪಬ್ಲಿಕನ್ ವ್ಯವಸ್ಥೆಯನ್ನು ಸ್ಥಾಪಿಸುವುದಾಗಿ ಈ ದ್ವೀಪರಾಷ್ಟ್ರಗಳು ಹೇಳಿದ್ದವು. ಅದೇನೇ ಇದ್ದರೂ, ಮುಂದಿನ ವರ್ಷ ಜನಾಭಿಪ್ರಾಯಕ್ಕೆ ತೆರಳುವುದಾಗಿ ಪ್ರಧಾನಿ ಈಗ ಹೇಳಿದ್ದಾರೆ.
96 ವರ್ಷ ವಯಸ್ಸಿನ, ಬ್ರಿಟನ್ನಿನ ಅತ್ಯಂತ ಸುದೀರ್ಘ ಕಾಲದ ರಾಣಿಯಾಗಿದ್ದ ಎರಡನೇ ಎಲಿಝಬೆತ್ ಅವರು ಮೃತರಾದರೆಂದು ಬಕಿಂಗ್ ಹ್ಯಾಮ್ ಅರಮನೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ ನಂತರ ಪ್ರಧಾನಿ ಬ್ರೌನ್ ತಮ್ಮ ನಿರ್ಧಾರವನ್ನು ಬಹಿರಂಗವಾಗಿ ಘೋಷಿಸಿದ್ದಾರೆ.