ಉಕ್ರೇನ್‌ ಮೇಲಿನ ದಾಳಿ ನಿಲ್ಲಿಸುವುದು ಈಗಿನ ತುರ್ತು: ವಿದೇಶಾಂಗ ಸಚಿವ ಎಸ್‌.ಜೈಶಂಕರ್

S Jaishankar
  • ಭದ್ರತಾ ಮಂಡಳಿ ಸಭೆಯಲ್ಲಿ ಜೈಶಂಕರ್‍‌ ಚರ್ಚೆ
  • ಉಕ್ರೇನ್ ಮೇಲಿನ ರಷ್ಯಾ ದಾಳಿ ಆಘಾತಕಾರಿ

ಕಳೆದ ಒಂದು ವರ್ಷದಿಂದ ಉಕ್ರೇನ್‌ ಮೇಲೆ ಸಮರ ಸಾರಿರುವ ರಷ್ಯಾವನ್ನು ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‍‌ ಗುರುವಾರ (ಸೆ.22) ತರಾಟೆಗೆ ತೆಗೆದುಕೊಂಡಿದ್ದಾರೆ.  

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿ ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅತ್ಯಂತ ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ (ಯುಎನ್‌ಎಸ್‌ಸಿ) ಜೈಶಂಕರ್‍‌ ಭಾಗವಹಿಸಿ ಉಕ್ರೇನ್‌ ವಿಚಾರವಾಗಿ ಮಾತುಕತೆ ನಡೆಸಿದರು.  

ಉಕ್ರೇನ್ ಸಂಘರ್ಷದ ಪರಿಣಾಮವನ್ನು ಬೆಲೆ ಏರಿಕೆ ಹಾಗೂ ಆಹಾರ ಧಾನ್ಯ, ರಸಗೊಬ್ಬರ, ಇಂಧನದ ಬೆಲೆ ಏರಿಕೆ ರೂಪದಲ್ಲಿ ಜಗತ್ತು ಅನುಭವಿಸಿದೆ ಎಂದು ಹೇಳಿದ್ದಾರೆ. 

“ಉಕ್ರೇನ್‌ನಲ್ಲಿ ರಷ್ಯಾ ಸಂಘರ್ಷವನ್ನು ಕೊನೆಗಾಣಿಸಿ ಮಾತುಕತೆ ಪ್ರಯತ್ನಗಳನ್ನು ಮುಂದುವರಿಸುವುದು ಈಗಿನ ತುರ್ತು ಅಗತ್ಯ. ಭದ್ರತಾ ಮಂಡಳಿಯು ರಾಜತಾಂತ್ರಿಕತೆಯ ಅತ್ಯಂತ ಪ್ರಭಾವಿ ಕುರುಹಾಗಿದೆ. ರಷ್ಯಾ ಮೇಲೆ ಒತ್ತಡ ಹೇರುವ ಮೂಲಕ ಜಗತ್ತಿನ ಮೇಲೆ ಉಂಟಾಗಿರುವ ಪರಿಣಾಮವನ್ನು ಕಡಿಮೆ ಮಾಡಲು ಸಹಕರಿಸಬೇಕು” ಎಂದು ಸಭೆಯಲ್ಲಿ ಹೇಳಿದರು.    

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಷ್ಯಾ ಅಧ್ಯಕ್ಷರೊಂದಿಗಿನ ಭೇಟಿಯ ವೇಳೆ ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಜೈಶಂಕರ್ ಈ ವೇಳೆ ನೆನಪಿಸಿಕೊಂಡರು.  

ಸಭೆಯಲ್ಲಿ ಇತರ ದೇಶಗಳ ವಿದೇಶಾಂಗ ಸಚಿವರ ಜತೆ ಜೈಶಂಕರ್ ಭಾಗವಹಿಸಿದ್ದರು.
ಉಕ್ರೇನ್ ಸಂಘರ್ಷದ ಪರಿಣಾಮವನ್ನು ಹಲವು ರೀತಿಯಲ್ಲಿ ಜಗತ್ತು ಅನುಭವಿಸುತ್ತಿದೆ. ಆದ್ದರಿಂದಲೇ ಭಾರತ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಲಹೆ ನೀಡುತ್ತಿದೆ ಎಂದು ಜೈಶಂಕರ್ ತಿಳಿಸಿದರು.

‘ಭಾರತ, ಉಕ್ರೇನ್‌ಗೆ  ಕಾಯಂ ಸದಸ್ಯತ್ವ ನೀಡುತ್ತಿಲ್ಲ’ 
 
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಜಪಾನ್, ಬ್ರೆಜಿಲ್ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳಿಗೆ ಕಾಯಂ ಸ್ಥಾನ ನೀಡುತ್ತಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಧ್ವನಿ ಮುದ್ರಿಸಿದ ಸಂದೇಶದಲ್ಲಿ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ. ಖಂಡಿತವಾಗಿಯೂ ಇದು ಬಗೆಹರಿಯುವ ಸಮಯ ಬರುತ್ತದೆ ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯಲ್ಲಿ ಸುಧಾರಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಇವೆಲ್ಲವೂ ಹೇಗೆ ಅಂತ್ಯಗೊಂಡವು? ಯಾವುದೇ ಸುಧಾರಣೆಗಳು ಜಾರಿಯಾಗಿಲ್ಲ ಎಂದು ಝೆಲೆನ್ಸ್ಕಿ ಸಂದೇಶದಲ್ಲಿ ಹೇಳಿದ್ದಾರೆ.

“ನೀವು ಶಾಂತಿಯ ಸೂತ್ರವನ್ನು ಎಚ್ಚರಿಕೆಯಿಂದ ಗಮನಹರಿಸಿದರೆ ಇದರ ಅನುಷ್ಠಾನವೇ ನೈಜ ಸುಧಾರಣೆಯಾಗಿ ತೋರುತ್ತದೆ. ನಮ್ಮ ಶಾಂತಿ ಸೂತ್ರವು ಸಾರ್ವತ್ರಿಕವಾಗಿದ್ದು, ಜಗತ್ತಿನ ಉತ್ತರ ಹಾಗೂ ದಕ್ಷಿಣವನ್ನು ಒಗ್ಗೂಡಿಸುತ್ತದೆ” ಎಂದು ಹೇಳಿದ್ದಾರೆ. 

“ಶಾಂತಿ ಬಗ್ಗೆ ಉಕ್ರೇನ್ ಧ್ವನಿ ಎತ್ತುತ್ತದೆ. ರಷ್ಯಾದಿಂದ ಎಂದಾದರೂ ಅಂತಹ ಬೇಡಿಕೆ ಕೇಳಿದ್ದೀರಾ? ಯಾವುದೋ ಕಾರಣದಿಂದಾಗಿ ಭದ್ರತಾ ಮಂಡಳಿಯ ಕಾಯಂ ಸ್ಥಾನ ಹೊಂದಿದೆ” ಎಂದು ಝೆಲೆನ್ಸ್ಕಿ ಸಂದೇಶದಲ್ಲಿ ಕುಟುಕಿದರು.  

ಈ ಸುದ್ದಿ ಓದಿದ್ದೀರಾ? ರಷ್ಯಾಗೆ ಶಸ್ತ್ರಾಸ್ತ್ರ ಪೂರೈಸುತ್ತಿಲ್ಲ: ಅಮೆರಿಕ ಆರೋಪ ನಿರಾಕರಿಸಿದ ಉತ್ತರ ಕೊರಿಯ

ಯಾವ ಕಾರಣಕ್ಕಾಗಿ ಭಾರತ, ಜಪಾನ್, ಬ್ರೆಜಿಲ್, ಟರ್ಕಿ, ಜರ್ಮನಿ ಮತ್ತು ನಮ್ಮ ಉಕ್ರೇನ್‌ಗೆ ಕಾಯಂ ಸ್ಥಾನ ದೊರೆಯುತ್ತಿಲ್ಲ. ಈ ಸಮಸ್ಯೆ ಬಗೆಹರಿಸುವ ದಿನ ಬರಲಿದೆ ಎಂದು ಸಂದೇಶದಲ್ಲಿ ಝೆಲೆನ್ಸ್ಕಿ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಐದು ಕಾಯಂ ಮತ್ತು 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಭಾರತಕ್ಕೆ ಕಾಯಂ ಸದಸ್ಯ ಸ್ಥಾನ ನೀಡಲು ಎಲ್ಲ ರಾಷ್ಟ್ರಗಳಿಂದ ಬೇಡಿಕೆ ನಿರಂತರವಾಗಿ ಕೇಳಿ ಬರುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್