
- ಯುರೋಪ್ ದೇಶಗಳಲ್ಲಿ ಹವಾಮಾನ ಮಿತಿಮೀರಿದ್ದು, ಹಲವು ಸಾವು - ನೋವು
- ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ ಯುರೋಪ್ ಪರಿಸರ ಸಂಸ್ಥೆ
ಯುರೋಪ್ನಲ್ಲಿ 1980ರಿಂದ 2020ರ ಅವಧಿಯಲ್ಲಿ ತೀವ್ರ ಉಷ್ಣಾಂಶ ಮತ್ತು ಬಿಸಿಗಾಳಿಯಿಂದ ಸುಮಾರು 1,29,000 ಮಂದಿ ಸಾವನ್ನಪ್ಪಿರುವುದಾಗಿ ಯುರೋಪ್ ಪರಿಸರ ಸಂಸ್ಥೆ(ಇಇಎ) ಹೇಳಿದೆ.
ಯುರೋಪ್ ದೇಶಗಳಲ್ಲಿ ಹವಾಮಾನ ಮಿತಿಮೀರಿದ್ದು, ಹಲವು ಸಾವು - ನೋವುಗಳಿಗೆ ಕಾರಣವಾಗಿದೆ. ಪ್ರಸ್ತುತ ಹವಾಮಾನ ವೈಪರೀತ್ಯಕ್ಕೆ ಸರ್ಕಾರಗಳು ಅಗತ್ಯವಿರುವ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪರಿಸರ ಸಂಸ್ಥೆ ಹೇಳಿದೆ.
2,100ರವರೆಗೆ ಪ್ರತೀ ವರ್ಷ 90,000 ಯುರೋಪಿಯನ್ನರು ಸಾವನ್ನಪ್ಪಬಹುದು ಎಂದು ಇಇಎ ಎಚ್ಚರಿಕೆ ನೀಡಿದೆ. ಒಂದು ವೇಳೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಶಿಯಸ್ಗೆ ಇಳಿಕೆಯಾದರೆ ಸಾವಿನ ಪ್ರಮಾಣ ವಾರ್ಷಿಕ 30,000ಕ್ಕೆ ಇಳಿಯಬಹುದು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಷ್ಯಾ- ಉಕ್ರೇನ್ ಯುದ್ಧ | ತೈಲ ಖರೀದಿಗೆ ಸಮರ್ಥನೆ ನೀಡಿದ ಜೈ ಶಂಕರ್; ಪುಟಿನ್ ಜೊತೆ ಝೆಲೆನ್ಸ್ಕಿ ಮಾತುಕತೆ
ಶಾಖದ ಅಪಾಯದ ಜತೆಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯು ಜ್ವರ ಯುರೋಪ್ ಅನ್ನು ಕಾಡಬಹುದು. ಬೆಚ್ಚಗಾಗುತ್ತಿರುವ ಸಮುದ್ರದ ನೀರು, ನಿರ್ದಿಷ್ಟವಾಗಿ ಬಾಲ್ಟಿಕ್ ಸಮುದ್ರದ ಕರಾವಳಿಯುದ್ದಕ್ಕೂ, ಕಾಲರಾವನ್ನು ಉಂಟು ಮಾಡುವ ಬ್ಯಾಕ್ಟೀರಿಯಾಕ್ಕೆ ಹೆಚ್ಚು ಸೂಕ್ತವಾಗಿದೆ. ಹವಾಮಾನ ಬದಲಾವಣೆ, ವಯಸ್ಸಾದ ಜನಸಂಖ್ಯೆ, ಹಾಗೂ ಹೆಚ್ಚಿದ ನಗರೀಕರಣದಿಂದಾಗಿ ಮುಂದಿನ ದಿನದಲ್ಲಿ ತಾಪಮಾನಕ್ಕೆ ಸಂಬಂಧಿಸಿದ ಸಾವಿನ ಪ್ರಮಾಣದಲ್ಲಿ ಏರಿಕೆಯಾಗಬಹುದು ಎಂದು ಇಇಎ ಹೇಳಿದೆ.
ಆಹಾರ - ನೀರಿನ ಕೊರತೆಯಲ್ಲಿ ಮಧ್ಯಪ್ರಾಚ್ಯ ದೇಶಗಳು
ಹವಾಮಾನ ಬದಲಾವಣೆ ಪ್ರಪಂಚದಾದ್ಯಂತ ಮಿತಿಮೀರಿದ್ದು, ಮಧ್ಯಪ್ರಾಚ್ಯ ದೇಶಗಳಿಗೆ ಭಾರೀ ಹೊಡೆತ ನೀಡಿದೆ. ಈಗಾಗಲೇ ಕೆಲವೊಂದು ದೇಶಗಳು ಆಹಾರ ಕೊರತೆ ಎದುರಿಸುತ್ತಿವೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮುಂದಿನ ವಾರ ಈಜಿಪ್ಟ್ನಲ್ಲಿ ಜಾಗತಿಕ ಹವಾಮಾನ ಶೃಂಗಸಭೆ ನಡೆಯಲಿದ್ದು, ಅದಕ್ಕೂ ಮೊದಲೇ ಈ ಆತಂಕಕಾರಿ ವರದಿ ಬಿಡುಗಡೆಯಾಗಿದೆ.
ವರದಿಯ ಪ್ರಕಾರ ಅಲ್ಜೀರಿಯಾ, ಈಜಿಪ್ಟ್, ಲೆಬನಾನ್, ಮೊರಾಕೊ, ಟ್ಯುನೀಶಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಶಾಖದ ಅಲೆಗಳಿಂದಾಗಿ ಭೂಮಿ ಹೆಚ್ಚು ಬಿಸಿಯಾಗುತ್ತಿದೆ. ಮಧ್ಯಪ್ರಾಚ್ಯವು ಜಾಗತಿಕ ಸರಾಸರಿಗಿಂತ ಸುಮಾರು ಎರಡು ಪಟ್ಟು ವೇಗವಾಗಿ ಬೆಚ್ಚಗಾಗುತ್ತಿದೆ ಎಂದು ಅಧ್ಯಯನ ಕಂಡು ಹಿಡಿದಿದ್ದು, ಇದರಿಂದಾಗಿ ಆಹಾರ ಮತ್ತು ನೀರಿದ ಕೊರತೆ ಉಂಟಾಗಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.