ಜಿ- 7 ವಾರ್ಷಿಕ ಶೃಂಗಸಭೆ; ಮೋದಿ ಜರ್ಮನಿ ಭೇಟಿ

  • ಜೂನ್‌ 26 ಮತ್ತು 27ರಂದು  ನಡೆಯುವ ಜಿ- 7 ವಾರ್ಷಿಕ ಶೃಂಗಸಭೆ
  • ಈ ಬಾರಿಯ ವಾರ್ಷಿಕ ಶೃಂಗಸಭೆಗೆ ಜರ್ಮನಿ ಅಧ್ಯಕ್ಷತೆ ವಹಿಸಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಜಿ– 7 ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೂನ್‌ 26 ಮತ್ತು 27ರಂದು ದಕ್ಷಿಣ ಜರ್ಮನಿಯ ಸ್ಕ್ಲೋಸ್ ಎಲ್ಮೌದ ಆಲ್ಪೈನ್ ಕ್ಯಾಸ್‌ಟ್ಲೆಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

ಜರ್ಮನಿಯ ಚಾನ್ಸಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ಜಿ- 7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೃಂಗಸಭೆಯಲ್ಲಿ ಇಂಡೋ- ಪೆಸಿಫಿಕ್‌ನಲ್ಲಿನ ಪರಿಸ್ಥಿತಿ, ಉಕ್ರೇನ್ ಬಿಕ್ಕಟ್ಟು ಸೇರಿ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇದೆ. 

ಶೃಂಗಸಭೆಯಲ್ಲಿ ಪರಿಸರ, ಇಂಧನ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವ ವಿಷಯದ ಬಗ್ಗೆ ಎರಡು ಅಧಿವೇಶನಗಳಲ್ಲಿ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷೆಯಿದೆ. ಇದೇ ವೇಳೆ ಕೆಲವು ದೇಶಗಳ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ಮೋದಿ ನಡೆಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಬ್ರಿಟನ್‌, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕ ಒಳಗೊಂಡ ಜಿ– 7ರ ಈ ಬಾರಿಯ ವಾರ್ಷಿಕ ಶೃಂಗಸಭೆಯ ಅಧ್ಯಕ್ಷತೆಯನ್ನು ಜರ್ಮನಿ ವಹಿಸಿದೆ. ಗಲ್ಫ್ ರಾಷ್ಟ್ರದ ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಮೋದಿ ಅವರು ಜೂನ್ 28ರಂದು ಜರ್ಮನಿಯಿಂದ ಸಂಯುಕ್ತ ಅರಬ್‌ ಸಂಸ್ಥಾನಕ್ಕೆ ಪ್ರಯಾಣಿಸಲಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್