ಹಸಿವಿನಿಂದ ತತ್ತರಿಸಿದ ವಿಶ್ವ | ಜಾಗತಿಕವಾಗಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ಸಾವು

  • 21ನೇ ಶತಮಾನದಲ್ಲಿ ವಿಶ್ವಾದ್ಯಂತ ಭೀಕರ ಬರಗಾಲದ ಬೇಗೆ
  • ಆಫ್ರಿಕದಲ್ಲಿ ಒಂದು ವರ್ಷಕ್ಕೆ ಎರಡನೇ ಬಾರಿ ಕ್ಷಾಮದ ಕಾವು

ಜಾಗತಿಕವಾಗಿ ಪ್ರತಿ ನಾಲ್ಕು ನಿಮಿಷಗಳಿಗೆ ಹಸಿವಿನಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ ಎಂದು 200ಕ್ಕೂ ಹೆಚ್ಚು ಎನ್‌ಜಿಒಗಳು ಸೇರಿ ಅಧ್ಯಯನ ಮಾಡಿದ ವರದಿಯಲ್ಲಿ ಬಹಿರಂಗಗೊಂಡಿದೆ. 

ಜಾಗತಿಕವಾಗಿ ಹಸಿವಿನ ಸಮಸ್ಯೆಯನ್ನು ಬಗೆಹರಿಸಲು ಅಂತಾರಾಷ್ಟ್ರೀಯ ಸಮುದಾಯಗಳು ಒಟ್ಟಾಗಬೇಕು ಎಂದು ವಿಶ್ವಸಂಸ್ಥೆಗೆ ಸರ್ಕಾರೇತರ ಸಂಘಟನೆಗಳು (ಎನ್‌ಜಿಒ)ಗಳು ಪತ್ರ ಬರೆದು ಆಗ್ರಹಿಸಿವೆ.

ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿನ ನಾಯಕರಿಗೆ ಈ ಬಹಿರಂಗ ಪತ್ರವನ್ನು ಬರೆಯಲಾಗಿದ್ದು, ಆಕ್ಸ್ ಫಾಮ್, ಸೇವ್ ದಿ ಚಿಲ್ಡ್ರನ್, ಪ್ಲಾನ್ ಇಂಟರ್ ನ್ಯಾಷನಲ್ ಸೇರಿದಂತೆ 75 ದೇಶಗಳ 238 ಸಂಘಟನೆಗಳು ಗಗನಕ್ಕೇರುತ್ತಿರುವ ಹಸಿವಿನ ಮಟ್ಟದ ಕುರಿತಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.

345 ಮಿಲಿಯನ್ ಮಂದಿ ತೀವ್ರ ಹಸಿವಿನಿಂದ ಬಳಲುತ್ತಿದ್ದು, 2019ರಿಂದ ಈ ಸಂಖ್ಯೆ ಹೆಚ್ಚಾಗಿದೆ ಎಂದು ಎನ್‌ಜಿಒಗಳು ತಿಳಿಸಿವೆ. 21ನೇ ಶತಮಾನದಲ್ಲಿ ಯಾವುದೇ ಕಾರಣಕ್ಕೂ  ಬರಗಾಲಕ್ಕೆ ಮತ್ತೆ ಅವಕಾಶ ನೀಡುವುದಿಲ್ಲ ಎಂದು ಜಾಗತಿಕ ನಾಯಕರು ಭರವಸೆಗಳನ್ನು ನೀಡಿದ್ದರೂ ಸೋಮಾಲಿಯದಲ್ಲಿ ತೀವ್ರ ಬರಗಾಲ ಮತ್ತು ಕ್ಷಾಮ ಉಂಟಾಗಿದೆ. ಜಾಗತಿಕ ಮಟ್ಟದಲ್ಲಿ 45 ರಾಷ್ಟ್ರಗಳಲ್ಲಿ 50 ಮಿಲಿಯನ್ ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ ಎಂದು ಎನ್‌ಜಿಒಗಳು ಹೇಳಿವೆ.

ಹಾರ್ನ್‌ ಆಫ್‌ ಆಫ್ರಿಕಾ ಒಂದು ವರ್ಷದಲ್ಲಿ ಎರಡನೇ ಬಾರಿ ಕ್ಷಾಮಕ್ಕೆ ಒಳಗಾಗಿದೆ. 40 ವರ್ಷಗಳಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿದೆ. ಅನೇಕ ಜಾನುವಾರುಗಳು ನಾಶವಾಗಿದ್ದು, ನಾಗರಿಕರು ಆಹಾರವಿಲ್ಲದೇ ಪರದಾಡುತ್ತಿದ್ದಾರೆ.

 ಈ ಸುದ್ದಿ ಓದಿದ್ದೀರಾ? ಸಚಿತ್ರ ಸುದ್ದಿ | ಜಾಗತಿಕ ಬಡತನ ಮತ್ತು ಹಸಿವು; ಹಲವು ಮುಖಗಳು

ಉಕ್ರೇನ್‌ ಯುದ್ಧ, ಕೋವಿಡ್‌ ಸಾಂಕ್ರಾಮಿಕರೋಗ, ಆಫ್ರಿಕದ ನಾಗರಿಕ ಯುದ್ಧ ಮುಂತಾದ ಕಾರಣಗಳಿಂದ ಆಫ್ರಿಕ ನಾಗರಿಕರು ಹಸಿವಿನಿಂದ ಕಂಗಲಾಗಿದ್ದಾರೆ. 2011ಕ್ಕೆ ಹೋಲಿಸಿದರೆ ಈ ವರ್ಷದ ಕ್ಷಾಮವು ಭಯಾನಕವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ  ಮಾರ್ಟಿನ್ ಗ್ರಿಫಿತ್ಸ್ ಈ ಮೊದಲು ಮಾಹಿತಿ ನೀಡಿದ್ದರು.

ಪ್ರತಿ ದಿನವೂ 19,700 ಮಂದಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ ನಾಲ್ಕು ನಿಮಿಷಕ್ಕೆ ಓರ್ವ ವ್ಯಕ್ತಿ ಹಸಿವಿನಿಂದ ಸಾವನ್ನಪ್ಪುತ್ತಿದ್ದಾನೆ ಎಂದಾಗುತ್ತದೆ.

ಕೃಷಿಯಲ್ಲಿ ಎಲ್ಲಾ ರೀತಿಯ ತಂತ್ರಜ್ಞಾನಗಳಿರುವ ಹೊರತಾಗಿಯೂ 21ನೇ ಶತಮಾನದಲ್ಲಿ ಬರಗಾಲ ಎದುರಿಸುತ್ತಿದ್ದೇವೆ. ಇದು ಹೀನಾಯ ಪರಿಸ್ಥಿತಿ ಎಂದು ಪತ್ರ ಬರೆದಿರುವ ಸಂಘಟನೆಯ ಸಾಮಾಜಿಕ ಕಾರ್ಯಕರ್ತ ಮೋಹನ ಅಹ್ಮದ್ ಅಲಿ ಎಲ್ಜಬಲಿ ಹೇಳಿದ್ದಾರೆ. 

ಅಫ್ಘಾನಿಸ್ತಾನದಲ್ಲಿ ಹಸಿವಿನ ಬಿಕ್ಕಟ್ಟು

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡಾಗಿನಿಂದ ಉದ್ಭವವಾಗಿರುವ ಮಾನವೀಯ ಬಿಕ್ಕಟ್ಟಿನಿಂದಾಗಿ 1.4 ಕೋಟಿ ಮಂದಿ ಆಹಾರವಿಲ್ಲದೇ ಪರದಾಡುತ್ತಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಅಫ್ಘಾನಿಸ್ತಾನದಲ್ಲಿ ಆಹಾರದ ಕೊರತೆ ಉಂಟಾಗಿದೆ. ದೇಶದಲ್ಲಿ ಶೇ. 40ಕ್ಕಿಂತಲೂ ಹೆಚ್ಚು ಬೆಳೆ ನಾಶವಾಗಿದೆ. ಸಂಗ್ರಹಿಸಿದ ಆಹಾರ ಧಾನ್ಯಗಳು ನಾಗರಿಕರಿಗೆ ಸಾಕಾಗುತ್ತಿಲ್ಲ.

ಈ ವರ್ಷದ ಮೇ ತಿಂಗಳಲ್ಲಿ 40 ಲಕ್ಷ ಮಂದಿಯ ಹಸಿವಿನ ಸಮಸ್ಯೆ ಪರಿಹರಿಸಲಾಗಿದೆ. ಮುಂದಿನ ದಿನಗಳಲ್ಲಿ 90 ಲಕ್ಷ ನಾಗರಕರಿಗೆ ಆಹಾರ ಕಲ್ಪಿಸಬೇಕಾದ ದೊಡ್ಡ ಸವಾಲು ಮುಂದಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. 

ಬ್ರಿಜಿಲ್‌ನ 33 ಲಕ್ಷ ನಾಗರಿಕರಿಗೆ ಆಹಾರದ ಕೊರತೆ

ಬ್ರೆಜಿಲಿಯನ್ ನೆಟ್‌ವರ್ಕ್ ಫಾರ್ ರಿಸರ್ಚ್ ಆನ್ ಫುಡ್ ಸೆಕ್ಯುರಿಟಿ ಪ್ರಕಾರ, "ಕಳೆದ ಎರಡು ವರ್ಷಗಳಲ್ಲಿ ಬ್ರಿಜಿಲ್‌ನಲ್ಲಿ ಹಸಿವಿನಿಂದ ನರಳುವ ನಾಗರಿಕರ ಸಂಖ್ಯೆ 73 ಪ್ರತಿಶತದಷ್ಟು ಹೆಚ್ಚಾಗಿದೆ. "ಸುಮಾರು 33 ಲಕ್ಷ ಮಂದಿ ತೀವ್ರ ಆಹಾರ ಅಭದ್ರತೆ ಎದುರಿಸುತ್ತಿದ್ದಾರೆ. ಗಗನಕ್ಕೇರುತ್ತಿರುವ ಆಹಾರದ ಬೆಲೆಗಳಿಂದಾಗಿ ಕುಟುಂಬ ಭಿಕ್ಷಾಟನೆಗೆ ಇಳಿಯಬೇಕಾದ ಸ್ಥಿತಿ ಬಂದಿದೆ ಎಂದು ಮಹಿಳೆಯೊಬ್ಬರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜಾಗತಿಕವಾಗಿ ಹಸಿವು, ಬಡತನ ಕೋವಿಡ್‌ನಿಂದ ಹೆಚ್ಚಾಗಿದೆ. ಇದಲ್ಲದೇ ಉಕ್ರೇನ್‌ ಯುದ್ಧದಿಂದಾಗಿ ಪ್ರಮುಖ ದೇಶಗಳಲ್ಲಿ ಆರ್ಥಿಕ ಹಿಂಜರಿತ ಉಂಟಾಗಿದೆ ಎಂದು ವರದಿ ಬಹಿರಂಗಗೊಳಿಸಿದೆ.

ಜಿಂಬಾಬ್ವೆಗೆ 50 ಟನ್‌ ಆಹಾರ ಸರಬರಾಜು

ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಜಿಂಬಾಬ್ವೆಗೆ 50 ಟನ್‌ಗಳಷ್ಟು ಆಹಾರದ ನೆರವನ್ನು  ವಿಮಾನದ ಮೂಲಕ ರವಾನಿಸಲಾಗಿದೆ ಎಂದು ಯುಎಇ ಹೇಳಿದೆ.

ರಿಪಬ್ಲಿಕನ್ ಆಫ್ ಜಿಂಬಾಬ್ವೆಗೆ ಆಹಾರ ಪದಾರ್ಥಗಳನ್ನು ರವಾನಿಸಿರುವುದು ಉಭಯ ದೇಶಗಳ ನಡುವಿನ ಉತ್ತಮ ಸಂಬಂಧಕ್ಕೆ ಉದಾಹರಣೆ. ನಾವು ಕಳಿಸಿರುವ ಆಹಾರ ಮತ್ತು ವೈದ್ಯಕೀಯ ನೆರವಿನಿಂದ ಜಿಂಬಾಬ್ವೆಯಲ್ಲಿ ನೆಲೆಸಿರುವ ಮಹಿಳೆಯರು, ಮಕ್ಕಳು ಹಾಗೂ ವೃದ್ಧರಂತಹ ದುರ್ಬಲ ವರ್ಗ ಸೇರಿದಂತೆ ಸಾವಿರಾರು ಕುಟುಂಬಗಳ ಅಗತ್ಯವನ್ನು ಕೆಲ ದಿನಗಳವರೆಗೆ ಪೂರೈಸಬಹುದು ಎಂದು ಯುಎಇ ಹೇಳಿದೆ.

ಕೋವಿಡ್‌ ಕಾರಣದಿಂದಾಗಿ ಆಫ್ರಿಕಾದ ಬಹುತೇಕ ದೇಶಗಳು ತೊಂದರೆಗೆ ಸಿಲುಕಿದ್ದು, ಒಂದು ಹೊತ್ತಿನ ಆಹಾರ ಸಾಮಗ್ರಿ ಪೂರೈಸಿಕೊಳ್ಳಲು ಹೆಣಗಾಡುತ್ತಿವೆ. ಈಗಾಗಲೇ ಟ್ಯುನಿಷಿಯ, ಕೀನ್ಯಾ, ಇಥಿಯೋಪಿಯ, ನೈಜೀರಿಯ ಮುಂತಾದ ದೇಶಗಳು ಹಣದುಬ್ಬರದಿಂದ ತತ್ತರಿಸಿದ್ದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಸಾಲಕ್ಕಾಗಿ ಮನವಿ ಮಾಡಿವೆ.

ವಿಶ್ವನಾಯಕರು ಕಟಿಬದ್ಧರಾಗುವ ಅಗತ್ಯವಿದೆ

ವಿಶ್ವಾದ್ಯಂತ 800 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ, ಶೇ.11ರಷ್ಟು ಮಂದಿ ಹಸಿವಿನಿಂದ ಬಳಲುತ್ತಿದ್ದಾರೆ. ಹಸಿವು, ಬಡತನ ಅಂತರ್ಗತವಾಗಿ ತಳಕು ಹಾಕಿಕೊಂಡಿವೆ. ಸಾಮಾಜಿಕ ಅನ್ಯಾಯ ಮತ್ತು ತಾರತಮ್ಯದಿಂದಾಗಿ ಬಡವರು ಆರೋಗ್ಯ, ಶಿಕ್ಷಣ, ವೈದ್ಯಕೀಯದಂತಹ ಪ್ರಾಥಮಿಕ ಅಗತ್ಯಗಳಿಂದ ವಂಚಿತರಾಗಿದ್ದಾರೆ. ಪರಿಣಾಮವಾಗಿ ಹಸಿವು, ಅಪೌಷ್ಟಿಕತೆ ಹಾಗೂ ಆಹಾರ ಭದ್ರತೆಯಲ್ಲಿ ಕೊರತೆಯಾಗಿದೆ. ಜಗತ್ತಿನ ಭವಿಷ್ಯವನ್ನು ಗಮನದಲ್ಲಿರಿಸಿ ಹಸಿವಿನ ಸಮಸ್ಯೆ ನೀಗಿಸಲು ಸಂಬಂಧಿತರು, ವಿಶ್ವ ನಾಯಕರು ಕಟಿಬದ್ಧರಾಗುವ ಅಗತ್ಯವಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್