ಭಾರತದ ಹೊರಗೆ ಮೋದಿ ಆಸ್ತಿ ಎಷ್ಟು; ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

  • ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿ
  • ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖಾನ್

ಭ್ರಷ್ಟಾಚಾರದ ವಿಚಾರದಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ನಾಯಕ ನವಾಜ್ ಷರೀಫ್  ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೋಲಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಟೀಕಿಸಿದ್ದಾರೆ. ಆ ಮೂಲಕ ಭಾರತದ ಪ್ರಧಾನಿಯವರನ್ನು ಪರೋಕ್ಷವಾಗಿ ಹೊಗಳಿದ್ದಾರೆ.

ಏಪ್ರಿಲ್‌ನಲ್ಲಿ ತಮ್ಮ ನಾಯಕತ್ವದ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಬಳಿಕ ಅಧಿಕಾರ ಕಳೆದುಕೊಂಡಿರುವ ಇಮ್ರಾನ್ ಖಾನ್, ಮುಂದಿನ ಚುನಾವಣೆಯಲ್ಲಿ ಪಿಟಿಐ ಪಕ್ಷವನ್ನು ಗೆಲ್ಲಿಸಲು ದೇಶಾದ್ಯಂತ ವ್ಯಾಪಕ ಸಭೆಗಳು, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ತಮ್ಮ ಬಹುತೇಕ ಭಾಷಣಗಳಲ್ಲಿ ಅವರು ಭಾರತ ಮತ್ತು ಮೋದಿ ಸರ್ಕಾರವನ್ನು ಪದೇಪದೇ ಹೊಗಳುತ್ತಾ ಬಂದಿದ್ದಾರೆ.

ಭಾರತದ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಪಶ್ಚಿಮ ದೇಶಗಳಿಂದ ಭಾರಿ ಒತ್ತಡಗಳಿದ್ದರೂ ರಿಯಾಯಿತಿ ದರದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವ ಕುರಿತು ಭಾರತವನ್ನು ಅವರು ಈ ಹಿಂದೆ ಶ್ಲಾಘಿಸಿದ್ದರು.

ಈ ಬಾರಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಖಾನ್, ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಂತೆ ವಿದೇಶಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿರುವ ರಾಜಕಾರಣಿ ಅಥವಾ ನಾಯಕ ಈ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ದೇಶದ ಒಳಗೆ ಬಲವಾದ ಕಾನೂನು ಇಲ್ಲದಿದ್ದರೆ ಭ್ರಷ್ಟಾಚಾರ ಹೆಚ್ಚಾಗಿ ನಡೆಯತ್ತದೆ. ತಮ್ಮ ದೇಶದ ಹೊರಗೆ ಕೋಟ್ಯಂತರ ಮೌಲ್ಯದ ಆಸ್ತಿಗಳನ್ನು ಹೊಂದಿರುವ ನಾಯಕನಿರುವ ಮತ್ತೊಂದು ದೇಶದ ಹೆಸರು ನನಗೆ ಹೇಳಿ. ನಮ್ಮ ನೆರೆಯ ದೇಶದಲ್ಲಿ ಕೂಡ, ಪ್ರಧಾನಿ ಮೋದಿ ಅವರು ಭಾರತದಿಂದ ಹೊರಗೆ ಎಷ್ಟು ಆಸ್ತಿಗಳನ್ನು ಹೊಂದಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಷ್ಟ್ರೀಯ ಸಂಭ್ರಮವಾಗಬೇಕಿದ್ದ ಚೀತಾಗಳ ಆಗಮನ ವ್ಯಕ್ತಿ ಆರಾಧನೆಗೆ ಬಲಿಯಾದ “ಹಿಂದುತ್ವ” – “ಮುಂದುತ್ವ”ಗಳ ಒಂದು ನೋಟ

"ನವಾಜ್ ಷರೀಫ್ ವಿದೇಶದಲ್ಲಿ ಎಷ್ಟು ಆಸ್ತಿ ಮತ್ತು ಸಂಪತ್ತನ್ನು ಹೊಂದಿದ್ದಾರೆ ಎನ್ನುವುದನ್ನು ಯಾರಿಗೂ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ" ಎಂದು ಖಾನ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್