
- ಶಾರುಖ್ ಖಾನ್ ಮತ್ತು ಸಲ್ಮಾನ್ ಮೀರಿಸಿದ ಇಮ್ರಾನ್ ಖಾನ್
- ಆರು ದಿನದಿಂದ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ
ನಟನಾ ಕೌಶಲ್ಯದಲ್ಲಿ ಇಮ್ರಾನ್ ಖಾನ್ ಅವರು ಬಾಲಿವುಡ್ ನಟರಾದ ಶಾರುಖ್ ಮತ್ತು ಸಲ್ಮಾನ್ ಖಾನ್ ಅವರನ್ನು ಮೀರಿಸಿದ್ದಾರೆ ಎಂದು ಪಾಕಿಸ್ತಾನ್ ಡೆಮೊಕ್ರಾಟ್ ಮೂವ್ಮೆಂಟ್ (ಪಿಡಿಎಂ) ಅಧ್ಯಕ್ಷ ಮೌಲಾನಾ ಫಝಲ್ಉರ್ ರೆಹ್ಮಾನ್ ಹೇಳಿದ್ದಾರೆ.
ನವೆಂಬರ್ 3ರಂದು ಪಾಕಿಸ್ತಾನದಲ್ಲಿ ಸಮಾವೇಶ ನಡೆಸುತ್ತಿದ್ದ ವೇಳೆ ಮಾಜಿ ಪ್ರಧಾನಿ, ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಪಾಕಿಸ್ತಾನದ ಗುಜ್ರಾನ್ವಾಲಾದಲ್ಲಿ ಈ ಘಟನೆ ನಡೆದಿದ್ದು, ಕಳೆದ ಆರು ದಿನದಿಂದ ಇಮ್ರಾನ್ ಖಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಮ್ರಾನ್ ಖಾನ್ ಅವರನ್ನು ಕೊಲ್ಲಲೆಂದೇ ಗುಂಡು ಹಾರಿಸಿದ್ದೆ ಎಂದು ಗುಂಡು ಹಾರಿಸಿದ ವ್ಯಕ್ತಿ ಪೊಲೀಸ್ ವಿಚಾರಣೆ ಸಮಯದಲ್ಲಿ ಹೇಳಿದ್ದ.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನ | ರಾಜಕೀಯ ಬಿಕ್ಕಟ್ಟಿಗೆ ಮುನ್ನುಡಿ ಬರೆದ ರಾಜಕೀಯ ಪಕ್ಷಗಳು
ಇದೀಗ ಕಾಲಿಗೆ ಗುಂಡೇಟು ತಗಲಿರುವ ಪಂಜಾಬ್ ಪ್ರಾಂತ್ಯದ ವಜೀರಾಬಾದ್ನಿಂದಲೇ ಪಾದಯಾತ್ರೆಯನ್ನು ಪುನರಾರಂಭಿಸುತ್ತೇವೆ ಎಂದು ಪಿಟಿಐ ಘೋಷಿಸಿದೆ. ಇದರ ಬೆನ್ನಲ್ಲೇ ಡೆಮಾಕ್ರಾಟ್ ಮೂವ್ಮೆಂಟ್(ಪಿಡಿಎಂ) ಅಧ್ಯಕ್ಷ ಮೌಲಾನಾ ಫಝಲ್ಉರ್ ರೆಹ್ಮಾನ್ ಅವರು ಇಮ್ರಾನ್ ಖಾನ್ ನಾಟಕ ಮಾಡುತ್ತಿರುವುದಾಗಿ ಟೀಕಿಸಿದ್ದಾರೆ.
"ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಪಾಕಿಸ್ತಾನದ ಸೇನೆ ಭೀತಿ ಹುಟ್ಟಿಸಲು ಪ್ರಯತ್ನಿಸುತ್ತಿದೆ. ಇಂಥ ತಂತ್ರಗಳಿಗೆ ಮಣಿಯುವುದಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಅವಧಿಗೆ ಪೂರ್ವ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಮುಂದಿಟ್ಟು ಇಮ್ರಾನ್ ಖಾನ್ ಕಳೆದ ಕೆಲವು ದಿನಗಳಿಂದ ಪಾದಯಾತ್ರೆ ನಡೆಸುತ್ತಿದ್ದಾರೆ.