ಭಾರತ- ಗಲ್ಫ್ ಸಹಕಾರ ಮಂಡಳಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ

  • ದ್ವಿಪಕ್ಷೀಯ ಒಪ್ಪಂದಕ್ಕೆ ಉಭಯ ನಾಯಕರು ಸಹಿ
  • ಅಂತರ್‌ಸರ್ಕಾರಿ, ರಾಜಕೀಯ ಮತ್ತು ಆರ್ಥಿಕ ಒಕ್ಕೂಟ

ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ಗಲ್ಫ್ ಸಹಕಾರ ಮಂಡಳಿಯ(ಜಿಸಿಸಿ) ಪ್ರಧಾನ ಕಾರ್ಯದರ್ಶಿ ನಯೆಫ್ ಫ‌ಲಾಹ್‌ ಮುಬಾರಕ್‌ ಅಲ್‌- ಹಜ್ರಾಫ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಭಾರತ ಮತ್ತು ಗಲ್ಫ್ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಉಭಯ ನಾಯಕರು ಸಹಿ ಹಾಕಿದ್ದಾರೆ.

ಮೂರು ದಿನಗಳ ಭೇಟಿ ಹಿನ್ನೆಲೆಯಲ್ಲಿ ಜೈಶಂಕರ್‌ ಅವರು ಶನಿವಾರ ಸೌದಿ ಅರೇಬಿಯಗೆ ಆಗಮಿಸಿದ್ದರು. ವಿದೇಶಾಂಗ ಸಚಿವರಾಗಿ ಸೌದಿಗೆ ಜೈಶಂಕರ್‌ ಅವರ ಮೊದಲ ಭೇಟಿಯಾಗಿದೆ.

ಉಭಯ ನಾಯಕರು ಪ್ರಸ್ತುತ ಪ್ರದೇಶಿಕ ಮತ್ತು ಜಾಗತಿಕ ಪರಿಸ್ಥಿತಿ, ಮುಕ್ತ ವ್ಯಾಪಾರ, ಹವಾಮಾನ ಬದಲಾವಣೆ ಮುಂತಾದ ವಿಷಯಗಳ ಕುರಿತು  ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತ- ಜಿಸಿಸಿ ಸಹಕಾರದ ಪ್ರಸ್ತುತತೆ ಕುರಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ಉಜ್ಬೆಕಿಸ್ತಾನ್‌ ಶೃಂಗಸಭೆಯಲ್ಲಿ ಮೋದಿ, ಪುಟಿನ್‌, ಕ್ಸಿ ಜಿನ್‌ಪಿಂಗ್‌ ಭೇಟಿ ಸಾಧ್ಯತೆ

ಜಿಸಿಸಿ ಎಂಬುದು ಬಹ್ರೇನ್, ಕುವೈತ್‌, ಒಮನ್‌, ಕತಾರ್‌, ಸೌದಿ ಅರೆಬಿಯ ಹಾಗೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಒಳಗೊಂಡ ಒಂದು ಪ್ರದೇಶಿಕ, ಅಂತರ್‌ಸರ್ಕಾರಿ, ರಾಜಕೀಯ ಮತ್ತು ಆರ್ಥಿಕ ಒಕ್ಕೂಟವಾಗಿದೆ.

ಈ ಮೊದಲು ಪ್ರವಾದಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ವಿರುದ್ಧ ಗಲ್ಫ್ ಸಹಕಾರ ಮಂಡಳಿ ಆಕ್ರೋಶ ವ್ಯಕ್ತಪಡಿಸಿತ್ತು. ಪ್ರಚೋದನಕಾರಿ ಹೇಳಿಕೆಗಳು ಧರ್ಮ, ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತದೆ. ದ್ವೇಷ ಸಾಧಿಸಲು ಕಾರಣವಾಗುತ್ತದೆ ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

 ಗಲ್ಫ್ ಸಹಕಾರ ಮಂಡಳಿಯ ಉದ್ದೇಶಗಳು

  • ಧರ್ಮ, ಹಣಕಾಸು, ವ್ಯಾಪಾರ, ಸಂಪ್ರದಾಯಗಳು, ಪ್ರವಾಸೋದ್ಯಮ, ಶಾಸನ ಹಾಗೂ ಆಡಳಿತದಂತಹ ವಿವಿಧ ಕ್ಷೇತ್ರಗಳಲ್ಲಿ ಒಂದೇ ರೀತಿಯ ನಿಯಮಗಳನ್ನು ರೂಪಿಸುವುದು.
  • ಕೈಗಾರಿಕೆ, ಗಣಿಗಾರಿಕೆ, ಕೃಷಿ, ನೀರು ಮತ್ತು ಪ್ರಾಣಿ ಸಂಪನ್ಮೂಲಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿ ಉತ್ತೇಜಿಸುವುದು.
  • ವೈಜ್ಞಾನಿಕ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವುದು.
  • ಜಂಟಿ ಉದ್ಯಮಗಳನ್ನು ಸ್ಥಾಪಿಸುವುದು.
  • ಏಕೀಕೃತ ಮಿಲಿಟರಿ (ಪೆನಿನ್ಸುಲಾ ಶೀಲ್ಡ್ ಫೋರ್ಸ್).
  • ಖಾಸಗಿ ವಲಯದ ಸಹಕಾರ ಉತ್ತೇಜಿಸುವುದು.
  • ಅವರ ಜನರ ನಡುವಿನ ಸಂಬಂಧ ಬಲಪಡಿಸುವುದು.
ನಿಮಗೆ ಏನು ಅನ್ನಿಸ್ತು?
0 ವೋಟ್