ಇರಾನ್‌ ಹಿಜಾಬ್‌ ಆಂದೋಲನ | ವೇದಿಕೆ ಮೇಲೆ ಕೂದಲು ಕತ್ತರಿಸಿಕೊಂಡ ಟರ್ಕಿಶ್ ಗಾಯಕಿ

  • ಕಳೆದ ಒಂದು ವಾರದಿಂದ ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ
  • ವೇದಿಕೆಯ ಮೇಲೆ ಕೂದಲನ್ನು ಕತ್ತರಿಸಿಕೊಂಡ ʼಮೆಲೆಕ್ ಮೊಸ್ಸೊʼ

ಟರ್ಕಿಶ್ ಗಾಯಕಿ ಮೆಲೆಕ್ ಮೊಸ್ಸೊ ಇರಾನ್‌ನಲ್ಲಿ ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಹಿಜಾಬ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದು ವೇದಿಕೆಯ ಮೇಲೆ ʼಮೆಲೆಕ್ ಮೊಸ್ಸೊʼ ತನ್ನ ಕೂದಲನ್ನು ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತು ಗಾಯಕಿ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಳೆದ ಒಂದು ವಾರದಿಂದ ಹಿಜಾಬ್‌ ವಿರುದ್ಧ ಇರಾನ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, 24 ಗಂಟೆಗಳಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಸಾವಿಗೀಡಾಗಿದ್ದಾರೆ. ಈ ಮೂಲಕ ಪ್ರತಿಭಟನಾನಿರತ ಮಹಿಳೆಯರ ಸಾವಿನ ಸಂಖ್ಯೆ 75ಕ್ಕೆ ಏರಿದೆ. ಇದಲ್ಲದೇ 750ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

22 ವರ್ಷದ ಮಹ್ಸಾ ಅಮಿನಿ ಹಿಜಾಬ್ ತೊಡದೆ ಬಹಿರಂಗವಾಗಿ ಕಾಣಿಸಿಕೊಂಡಾಗ ನೈತಿಕ ಪೊಲೀಸ್ ಪಡೆಗಳ ಬಂಧನಕ್ಕೆ ಒಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬಳಿಕ ಇರಾನ್ ಮಹಿಳೆಯರು ಹುದುಗಿಟ್ಟಿದ್ದ ಆಕ್ರೋಶ- ದುಗುಡಗಳನ್ನು ಬಹಿರಂಗವಾಗಿ ಪ್ರಕಟಿಸುತ್ತಿದ್ದಾರೆ. ಹಿಜಾಬ್‌ನಿಂದ ಹೆಣ್ಣು ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ, ಅದನ್ನು ತೊಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. 

ಕಟ್ಟುನಿಟ್ಟಾದ ಇರಾನ್‌ ವಸ್ತ್ರ ಸಂಹಿತೆ

1979ರ ಇಸ್ಲಾಮಿಕ್ ಕ್ರಾಂತಿಯ ನಂತರ, ಇರಾನ್‌ನಲ್ಲಿ ಅಧಿಕಾರಿಗಳು ಕಡ್ಡಾಯ ಉಡುಪು ಸಂಹಿತೆ ಹೇರಿದ್ದರು. ಇದರಂತೆ ಎಲ್ಲ ಮಹಿಳೆಯರು ಸಾರ್ವಜನಿಕವಾಗಿ ಹಿಜಾಬ್‌ ಮತ್ತು ಸಡಿಲ ಬಟ್ಟೆಗಳನ್ನು ಧರಿಸಬೇಕು ಎಂಬ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇರಾನ್‌ನಲ್ಲಿ ಮಹಿಳೆಯರ ಮೇಕಪ್‌, ಬಟ್ಟೆ, ಕೂದಲು ಎಲ್ಲವನ್ನೂ ಗಮನಿಸುತ್ತಾರೆ. ಇವುಗಳಿಗೆ ಸಂಬಂಧಿಸಿದ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೂ ಸಹ ದಂಡ ಅಥವಾ ಶಿಕ್ಷೆ ನೀಡಲಾಗುತ್ತದೆ.

2014ರಲ್ಲಿ ಇರಾನ್ ಮಹಿಳೆಯರು "ಮೈ ಸ್ಟೆಲ್ತಿ ಫ್ರೀಡಮ್" ಎಂಬ ಆನ್‌ಲೈನ್ ಪ್ರತಿಭಟನಾ ಅಭಿಯಾನದ ಭಾಗವಾಗಿ ಹಿಜಾಬ್ ಕಾನೂನುಗಳನ್ನು ಸಾರ್ವಜನಿಕವಾಗಿ ಉಲ್ಲಂಘಿಸುವ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು "ಶ್ವೇತ ಬುಧವಾರಗಳು" ಮತ್ತು "ಕ್ರಾಂತಿಯ ಬೀದಿಯ ಹುಡುಗಿಯರು" ಸೇರಿದಂತೆ ಇತರ ಚಳವಳಿಗಳಿಗೆ ಸ್ಫೂರ್ತಿ ನೀಡಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್