ಇಟಲಿ | ಭೂಕುಸಿತಕ್ಕೆ 8 ಮಂದಿ ಸಾವು; 13 ಮಂದಿ ನಾಪತ್ತೆ

 Italy | 8 people died in the landslide; 13 people are missing
  • ಕಠಿಣವಾಗಿರುವ ಶೋಧ ಮತ್ತು ರಕ್ಷಣೆ ಕಾರ್ಯ
  • ಕೆಸರಿನ ರಾಡಿಗೆ ಕೊಚ್ಚಿಹೋದ ವಾಹನಗಳು

ಇಟಲಿಯ ಜನಪ್ರಿಯ ಪ್ರವಾಸಿ ತಾಣ ಇಷಿಯಾ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಟ 8 ಮಂದಿ ಮೃತಪಟ್ಟಿದ್ದು 13 ಮಂದಿ ನಾಪತ್ತೆಯಾಗಿದ್ದಾರೆ.

ನಿರಂತರ ಸುರಿಯುತ್ತಿರುವ ಮಳೆಯಿಂದ ಭೂಕುಸಿತ ಸಂಭವಿಸಿದ್ದು, ಕುಸಿದ ಕಟ್ಟಡಗಳ ಅವಶೇಷಗಳಡಿ ಇನ್ನೂ 100 ಮಂದಿ ಸಿಲುಕಿರುವ ಶಂಕೆಯಿದೆ ಎಂದು ಇಟಲಿಯ ಮೂಲಸೌಕರ್ಯ ಸಚಿವ ಮ್ಯಾಥಿಯೊ ಸಲ್ವಿನಿ ಹೇಳಿದ್ದಾರೆ.

Eedina App

ಕಠಿಣ ಪರಿಸ್ಥಿತಿ ಎದುರಿಸಿ ಶೋಧ ಮತ್ತು  ರಕ್ಷಣೆ ಕಾರ್ಯ ಮುಂದುವರಿದಿದೆ. ಈ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಭೂಕುಸಿತ ಸಂಭವಿಸಿದೆ. ಮಳೆ ಇನ್ನೂ ಮುಂದುವರಿದಿರುವುದು ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಇಟಲಿಯ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

AV Eye Hospital ad

ಭೂಕುಸಿತದಿಂದಾಗಿ ಎತ್ತರದ ಪ್ರದೇಶದಿಂದ ರಭಸದಿಂದ ಹರಿದು ಬಂದ ಮಣ್ಣು, ಕೆಸರಿನ ರಾಡಿಯ ರಭಸಕ್ಕೆ ಮನೆಯೆದುರು ನಿಲ್ಲಿಸಿದ್ದ ಕಾರುಗಳು ಕೊಚ್ಚಿಕೊಂಡು ಹೋಗುವ, ಮನೆ ಹಾಗೂ ಕಟ್ಟಡಗಳ ಗೋಡೆಗಳು ಕುಸಿದು ಬೀಳುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೆಸರಿನ ಪ್ರವಾಹಕ್ಕೆ ಸಿಲುಕಿದ ಕಾರೊಂದು ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿದ್ದು, ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ.

ಸುಮಾರು 30 ಕುಟುಂಬಗಳ 100ರಷ್ಟು ಮಂದಿ ತಮ್ಮ ಮನೆಯಲ್ಲಿ ಆಹಾರ, ನೀರು, ವಿದ್ಯುತ್ ಲಭ್ಯವಿಲ್ಲದೆ ಸಿಲುಕಿಕೊಂಡಿದ್ದು, ಸುತ್ತಮುತ್ತ ಕಟ್ಟಡದ ತ್ಯಾಜ್ಯ ಹಾಗೂ ಕೆಸರಿನ ರಾಶಿ ಬಿದ್ದಿರುವುದರಿಂದ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ? ಇಟಲಿ | ನೂತನ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ ಆಯ್ಕೆ

ದ್ವೀಪದೆಲ್ಲೆಡೆ ವಿದ್ಯುತ್ ಕಂಬಗಳು ಹಾಗೂ ಬೃಹತ್ ಮರಗಳು ಉರುಳಿ ಬಿದ್ದಿದ್ದು ಹೋಟೆಲ್ ಒಂದು ಕೆಸರು ಹಾಗೂ ಮಣ್ಣಿನ ರಾಶಿಯಡಿ ಮುಚ್ಚಿಹೋಗಿದೆ. ಹೋಟೆಲ್ನಲ್ಲಿರುವ ಸಿಬ್ಬಂದಿ ಹಾಗೂ ಗ್ರಾಹಕರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ವಿದ್ಯುತ್ ಪೂರೈಕೆ  ಮತ್ತು ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕೆಟ್ಟ ಹವಾಮಾನ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ. ಆದರೂ ಜನರನ್ನು ಉಳಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ನಾಗರಿಕ ರಕ್ಷಣೆ ಮತ್ತು ಸಾಗರ ಕಾರ್ಯನೀತಿ ಇಲಾಖೆಯ ಸಚಿವ ನೆಲ್ಲೋ ಮುಸುಮೆಸಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app