
- ಮೆಲೋನಿ ದೇಶದ ಮೊದಲ ಮಹಿಳಾ ಪ್ರಧಾನಿ
- ನೂತನ ಪ್ರಧಾನಿ ಮೆಲೋನಿ ಮೂಲತಃ ಪತ್ರಕರ್ತ
ಇಟಲಿಯ ನೂತನ ಪ್ರಧಾನಿಯಾಗಿ ಜೋರ್ಜಾ ಮೆಲೋನಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಎರಡನೇ ವಿಶ್ವ ಮಹಾಯುದ್ಧದ ಬಳಿಕ ಇಟಲಿಯಲ್ಲಿ ಮೊದಲ ಬಾರಿಗೆ ಬಲಪಂಥೀಯ ಚಿಂತನೆ ಹಿನ್ನೆಲೆ ಹೊಂದಿರುವ 'ಬ್ರದರ್ಸ್ ಆಫ್ ಇಟಲಿ' ಪಕ್ಷ ಚುನಾವಣೆಯಲ್ಲಿ ಗೆದ್ದು, ಅಧಿಕಾರ ಹಿಡಿದಿದೆ.
ಕಳೆದ ತಿಂಗಳು ಮುಕ್ತಾಯಗೊಂಡ ಚುನಾವಣೆಯಲ್ಲಿ ಲೀಗ್ ಆಫ್ ಮಟ್ಟೆಯೋ ಸಲ್ವಾನಿ, ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕಾನಿ ಅವರ ಫೋರ್ಜಾ ಇಟಾಲಿಯಾ ಪಕ್ಷದ ಜತೆಗೂಡಿ ಅವರು ಸರ್ಕಾರ ರಚಿಸಿದ್ದಾರೆ.
ನೂತನ ಪ್ರಧಾನಿ ಮೆಲೋನಿ ಮೂಲತಃ ಪತ್ರಕರ್ತರಾಗಿದ್ದವರು. ಜತೆಗೆ ಅವರು ದೇಶದ ಮೊದಲ ಮಹಿಳಾ ಪ್ರಧಾನಿಯೂ ಆಗಿದ್ದಾರೆ. ಮೆಲೋನಿ ನೇತೃತ್ವದ ಮೈತ್ರಿಕೂಟ ಶೇ. 43ರಷ್ಟು ಮತ ಪಡೆದಿದ್ದು, ಸೆನೆಟ್ನಲ್ಲಿ 114ಕ್ಕೂ ಹೆಚ್ಚು ಸ್ಥಾನಗಳು ಸಿಗುವುದು ಸ್ಪಷ್ಟವಾಗಿದೆ.
ಇಟಲಿ ಗದ್ದುಗೆ ಏರಲು 104 ಸ್ಥಾನಗಳ ಅವಶ್ಯಕತೆ ಇದ್ದು, ಎದುರಾಳಿ ಎನ್ರಿಕೋ ಲೇಟ್ಟಾ ಅವರ ಡೆಮಾಕ್ರಟಿಕ್ ಪಕ್ಷಕ್ಕೆ ಶೇ. 19ರಷ್ಟು ಮತ ದೊರೆತಿತ್ತು. ಮತ್ತೊಂದು ವಿಪಕ್ಷವಾದ ಗಿಯುಸೆಪ್ಪೆ ಕಾಂಟೆ ನಾಯಕತ್ವದ ಫೈವ್ ಸ್ಟಾರ್ ಮೂವ್ಮೆಂಟ್ ಪಕ್ಷ ಶೇ. 16ರಷ್ಟು ಮತ ಗಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಇಟಲಿ ಇತಿಹಾಸದಲ್ಲಿ ಮೊದಲ ಮಹಿಳಾ ಪ್ರಧಾನಿ; ಅಧಿಕಾರ ಹಿಡಿಯಲಿರುವ ಫ್ಯಾಸಿಸ್ಟ್ ಪಕ್ಷ
45 ವರ್ಷದ ಜಿಯಾರ್ಜಿಯಾ ಮೆಲೋನಿ ಕಟ್ಟರ್ ಬಲಪಂಥೀಯ ಪಕ್ಷವಾದ ಬ್ರದರ್ಸ್ ಅಫ್ ಇಟಲಿ ಮುಖ್ಯಸ್ಥರು. ಎರಡನೇ ವಿಶ್ವ ಮಹಾಯುದ್ಧದ ನಂತರ ಇಟಲಿಯಲ್ಲಿ ಕಟ್ಟರ್ ಬಲಪಂಥೀಯ ಪಕ್ಷವೊಂದು ಅಧಿಕಾರಕ್ಕೆ ಬರುತ್ತಿರುವುದು ಇದೇ ಮೊದಲಾಗಿದೆ.
ಇಪ್ಪತ್ತನೇ ಶತಮಾನದಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಸರ್ವಾಧಿಕಾರಿಗಳಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್, ಇಟಲಿಯ ಬೆನಿಟೋ ಮುಸ್ಸೋಲಿನಿ ಪ್ರಮುಖರು. ಮುಸ್ಸೋಲಿನಿಯ ನಂತರ ಫ್ಯಾಸಿಸ್ಟ್ ಎಂದು ಕರೆಯಲಾಗುವ ಇಟಲಿ ರಾಷ್ಟ್ರೀಯವಾದದ ಪರಂಪರೆಯನ್ನು ಬ್ರದರ್ಸ್ ಆಫ್ ಇಟಲಿ ಮುಂದುವರಿಸಿದೆ. ಬ್ರದರ್ಸ್ ಆಫ್ ಇಟಲಿಯನ್ನು ನಿಯೋಫ್ಯಾಸಿಸ್ಟ್ ಅಥವಾ ನವಫ್ಯಾಸಿಸ್ಟ್ ಪಕ್ಷವೆಂದು ಟೀಕಿಸಲಾಗಿದೆ.
ಮುಸ್ಸೋಲಿನಿ ನಿಧನದ ನಂತರ ಇಟಲಿಯಲ್ಲಿ ಇಟಲಿಯನ್ ಸೋಷಿಯಲ್ ಮೂವ್ಮೆಂಟ್, ನ್ಯಾಷನಲ್ ಅಲಾಯನ್ಸ್ ಮೊದಲಾದ ಅನೇಕ ನಿಯೋಫ್ಯಾಸಿಸ್ಟ್ ಪಕ್ಷಗಳು ಹುಟ್ಟಿಕೊಂಡವು.