
- ತೈವಾನ್ ಜಲಸಂಧಿ ಮೂಲಕ ಸಂಚರಿಸುವ ಸರಕು ಸಾಗಣೆ ಹಡಗುಗಳು
- ತೈವಾನ್ ಮೇಲೆ ಚೀನಾ ಮಿಲಿಟರಿ ಮತ್ತು ಆರ್ಥಿಕ ಒತ್ತಡ ಹೇರಲು ಯತ್ನ
ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗಾಗಿ ತೈವಾನ್ಗೆ ಸಂಬಂಧಿಸಿದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಚೀನಾಗೆ ಎಚ್ಚರಿಸಿದ್ದಾರೆ.
ಚಿಕಾಗೋ ವಿಶ್ವವಿದ್ಯಾಲಯದ ‘ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್’ನ ಸ್ಥಾಪಕ ನಿರ್ದೇಶಕ ಡೇವಿಡ್ ಆಕ್ಸೆಲ್ರಾಡ್ ಅವರೊಂದಿಗಿನ ಸಂವಾದದ ವೇಳೆ ಬ್ಲಿಂಕೆನ್ ಈ ಎಚ್ಚರಿಕೆ ನೀಡಿದ್ದಾರೆ.
"ಕಳೆದ ಹಲವು ವರ್ಷಗಳಿಂದಲೂ ತೈವಾನ್ ಮೇಲೆ ಚೀನಾ ಮಿಲಿಟರಿ ಮತ್ತು ಆರ್ಥಿಕ ಒತ್ತಡ ಹೇರಲು ಯತ್ನಿಸುತ್ತಿದೆ" ಎಂದು ಅವರು ಹೇಳಿದ್ದಾರೆ.
"ಜಗತ್ತಿನ ಶೇ. 50ರಷ್ಟು ಸರಕು ಸಾಗಣೆ ಹಡಗುಗಳು ತೈವಾನ್ ಜಲಸಂಧಿ ಮೂಲಕ ಸಂಚರಿಸುತ್ತವೆ. ವಿಶ್ವದಲ್ಲಿ ಬಳಕೆಯಾಗುತ್ತಿರುವ ಕಂಪ್ಯೂಟರ್ ಚಿಪ್ಗಳ ಪೈಕಿ, ಶೇ. 70ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ಚಿಪ್ಗಳನ್ನು ತೈವಾನ್ ಉತ್ಪಾದಿಸುತ್ತದೆ. ಒಂದು ವೇಳೆ ತೈವಾನ್ನ ಯಥಾಸ್ಥಿತಿಗೆ ಅಡ್ಡಿಪಡಿಸಿದರೆ ಜಾಗತಿಕ ಆರ್ಥಿಕತೆಯೇ ಬಳಲಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.
ತೈವಾನ್ ತನ್ನ ಭೂ ಆಧಾರಿತ ಕ್ಷಿಪಣಿ ವ್ಯವಸ್ಥೆಗಳ ಮೂಲಕ ಮತ್ತು ತನ್ನದೇ ಆದ ನೌಕಾಪಡೆಯ ಹಡಗುಗಳ ಮೂಲಕ, ಚೀನಾದ ಮಿಲಿಟರಿ ಚಲನವಲನಗಳ ಮೇಲೆ ನಿಗಾ ಇರಿಸಿದೆ.
ತೈವಾನ್ ಮತ್ತು ವಿಶ್ವದ ಅತ್ಯಂತ ಜನನಿಬಿಡ ಜಲಮಾರ್ಗಗಳಲ್ಲಿ ಒಂದಾಗಿರುವ ತೈವಾನ್ ಜಲಸಂಧಿಯ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ. ಆದರೆ ಇದನ್ನು ನಿರಾಕರಿಸುತ್ತಿರುವ ಅಮೆರಿಕ, "ತೈವಾನ್ ಜಲಸಂಧಿಯಲ್ಲಿ ಜಲಸಂಚಾರಕ್ಕೆ ಮುಕ್ತ ಸ್ವಾತಂತ್ರ್ಯವಿರಬೇಕು. ಇದು ಅಂತಾರಾಷ್ಟ್ರೀಯ ಜಲಮಾರ್ಗ" ಎಂದು ಪ್ರತಿಪಾದಿಸುತ್ತಿದೆ. ಅಮೆರಿಕದ ಈ ನಡೆಯನ್ನು ಪಾಶ್ಚಿಮಾತ್ಯ ಮಿತ್ರ ದೇಶಗಳು ಬೆಂಬಲಿಸಿವೆ.
ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ, ಚೀನಾದ ಮಿಲಿಟರಿ ಕಳೆದ ಆಗಸ್ಟ್ನಲ್ಲಿ ತೈವಾನ್ ಗಡಿ ಸಮೀಪ ದೊಡ್ಡ ಮಿಲಿಟರಿ ಸಮರಾಭ್ಯಾಸ ನಡೆಸಿತ್ತು.
ಈ ಸುದ್ದಿ ಓದಿದ್ದೀರಾ? ಚೀನಾಗೆ ನೆರವಿನ ಹಸ್ತ ಚಾಚಲು ತೈವಾನ್ ಸಿದ್ದ; ಅಧ್ಯಕ್ಷ್ಯೆ ತ್ಸೈ ಇಂಗ್ವೆನ್ ಘೋಷಣೆ
ವಿದೇಶಿ ರಾಷ್ಟ್ರದ ಪ್ರತಿನಿಧಿಗಳು ತನ್ನ ಅನುಮತಿ ಇಲ್ಲದೇ ತೈವಾನ್ ದ್ವೀಪಕ್ಕೆ ಭೇಟಿ ನೀಡುವುದು, ತೈವಾನ್ ವಾಸ್ತವಿಕ ಮಾನ್ಯತೆ ನೀಡುವುದು ತನ್ನ ಸಾರ್ವಭೌಮತ್ವದ ಹಕ್ಕಿಗೆ ಸವಾಲು ಎಂದು ಚೀನಾ ಪರಿಗಣಿಸುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ, "ತೈವಾನ್ ಮೇಲೆ ಯುದ್ಧ ಸಾರಿದರೆ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ರವಾನಿಸಿದೆ.