ಶಾಂತಿಯ ಸಂದೇಶ ಸಾರಿ ಶೆಹಬಾಜ್ ಷರೀಫ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

Shahbaz Sharif NARENDRA MODI
  • ಪ್ರಾದೇಶಿಕ ಶಾಂತಿಗಾಗಿ ಭಯೋತ್ಪಾದನೆ ಕೊನೆಗಾಣಲಿ ಎಂದ ಪ್ರಧಾನಿ ಮೋದಿ
  • ಮೊದಲ ಭಾಷಣದಲ್ಲೇ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ ಪಾಕ್ ನೂತನ ಪ್ರಧಾನಿ

ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಉಭಯ ದೇಶಗಳ ನಡುವಿನ ಸಮಸ್ಯೆಗಳ ಇತ್ಯರ್ಥಕ್ಕೆ ಪಾಕಿಸ್ತಾನದ ನೂತನ ಪ್ರಧಾನಿಯ ಸಹಕಾರದ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

"ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಹೆಚ್ ಇ ಮುಹಮ್ಮದ್ ಶೆಹಬಾಜ್ ಷರೀಫ್ ಅವರಿಗೆ ಅಭಿನಂದನೆಗಳು. ಭಾರತ ಭಯೋತ್ಪಾದನೆಯಿಂದ ಮುಕ್ತವಾಗಿ, ಶಾಂತಿ ಹಾಗೂ ಸ್ಥಿರತೆ ಪ್ರದೇಶದಲ್ಲಿ ನೆಲೆಸಬೇಕು ಎಂದು ಬಯಸುತ್ತದೆ. ಇದರಿಂದ ನಾವು ಅಭಿವೃದ್ಧಿ ಸವಾಲುಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಬಹುದು. ನಮ್ಮ ಜನರ ಯೋಗಕ್ಷೇಮ ಮತ್ತು ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು, ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಅತ್ಯಂತ ಅವಶ್ಯ" ಎಂದು ಪ್ರಧಾನಿ ಮೋದಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮೊದಲ ಭಾಷಣದಲ್ಲೇ ಜಮ್ಮು ವಿಚಾರ ಪ್ರಸ್ತಾಪಿಸಿದ ಪಾಕ್ ನೂತನ ಪ್ರಧಾನಿ

ಸೋಮವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ತಮ್ಮ ಮೊದಲ ಭಾಷಣದಲ್ಲೇ ಶೆಹಬಾಜ್ ಷರೀಫ್, ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದಾರೆ. ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರ ದೊರೆತಾಗ ಮಾತ್ರ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಗಟ್ಟಿಯಾಗಲಿದೆ ಎಂದು ಷರೀಫ್ ಅಭಿಪ್ರಾಯಪಟ್ಟಿದ್ದರು.

"ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕಾಗಿ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನ ಧ್ವನಿ ಎತ್ತಲಿದೆ. ದೇಶ ಉದಯವಾದ ದಿನದಿಂದಲೂ ಭಾರತದ ಜೊತೆ ಪಾಕಿಸ್ತಾನ ಸಂಬಂಧ ಉತ್ತಮವಾಗಿಲ್ಲ. ಇದು ಬಹಳ ದುರದೃಷ್ಟಕರ ವಿಚಾರ. ನಮ್ಮ ದೇಶದ ಸಮೀಪದಲ್ಲಿ ಯಾರು ಇರಬೇಕು ಎಂದು ನಾವು ಆಯ್ಕೆ ಮಾಡಲು ಸಾಧ್ಯವಿಲ್ಲ. ನಾವು ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು" ಎಂದು ಶೆಹಬಾಜ್ ಷರೀಫ್ ಹೇಳಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್