
- ಉತ್ತರ ಕೊರಿಯದಲ್ಲಿ ಸೋಂಕು ಏರಿಕೆಯಿಂದ ನಾಗರಿಕರ ಜೀವ ಅಪಾಯದಲ್ಲಿದೆ
- ನೆರವು ಸ್ವೀಕರಿಸುವಂತೆ ಉತ್ತರ ಕೊರಿಯಾವನ್ನು ಮನವೊಲಿಸಲು ವಿಶ್ವಸಂಸ್ಥೆ ಯತ್ನ
ಉತ್ತರ ಕೊರಿಯಾದಲ್ಲಿ ಗುರುವಾರ 2,62,000ಕ್ಕೂ ಹೆಚ್ಚು ಶಂಕಿತ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಲಸಿಕೆ ಹಾಕದ ಜನರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಉತ್ತರ ಕೊರಿಯಾದ ಆರೋಗ್ಯ ಇಲಾಖೆ ತಿಳಿಸಿದೆ.
ಉತ್ತರ ಕೊರಿಯಾದಲ್ಲಿ ಸೋಂಕು ಏರಿಕೆಯಿಂದ ಅಲ್ಲಿನ ನಾಗರಿಕರು ಅಪಾಯದಲ್ಲಿದ್ದಾರೆ. ಇದುವರೆಗೂ ಯಾರೂ ಲಸಿಕೆ ಹಾಕಿಸಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಾವುಗಳು ಉತ್ತರ ಕೊರಿಯಾದಲ್ಲಿ ಸಂಭವಿಸಬಹುದು ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
ಲಸಿಕೆ ಮತ್ತು ಔಷಧಿ ಸೇರಿದಂತೆ ಮುಂತಾದ ಸಹಾಯಗಳನ್ನು ಸ್ವೀಕರಿಸುವಂತೆ ಉತ್ತರ ಕೊರಿಯಾವನ್ನು ಮನವೊಲಿಸುವ ಕೆಲಸವನ್ನು ವಿಶ್ವಸಂಸ್ಥೆ ಮಾಡುತ್ತಿದೆ. ಅದರೆ, ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಹೇಳಿದ್ದಾರೆ.
"ದೇಶದ ಎಲ್ಲ ಪ್ರಾಂತ್ಯಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ. ಉದ್ಯೋಗ ಘಟಕಗಳು, ಉತ್ಪಾದನಾ ಘಟಕಗಳು ಮತ್ತು ನಿವಾಸಿ ಘಟಕಗಳನ್ನು ಮುಚ್ಚಲಾಗಿದೆ. ಸಾಂಕ್ರಾಮಿಕ ರೋಗವು ಉತ್ತರ ಕೊರಿಯಾದಲ್ಲಿ ಮಹಾ ವಿಪತ್ತು ಸೃಷ್ಟಿ ಮಾಡಿದೆ" ಎಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಲಸಿಕೆ ಪಡೆಯದ ಜನರ ನಡುವೆ ಸೋಂಕು ಹರಡುವ ವೇಗ ನಿಯಂತ್ರಿಸಲು ಗರಿಷ್ಠ ತುರ್ತು ಕ್ವಾರೆಂಟೈನ್ ವ್ಯವಸ್ಥೆ ಜಾರಿ ಮಾಡಿದ್ದರೂ, ಉತ್ತರ ಕೊರಿಯಾದಲ್ಲಿ ನಿತ್ಯವೂ ಅತ್ಯಧಿಕ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗುತ್ತಿವೆ.
ರಾಜಧಾನಿ ಪ್ಯಾಂಗ್ಯಾಂಗ್ನಲ್ಲಿ ಮೇ 12ರಂದು ಒಮಿಕ್ರಾನ್ ವೈರಸ್ ಹರಡಿರುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಕಿಮ್ ಅವರು ರಾಷ್ಟ್ರವ್ಯಾಪಿ ಲಾಕ್ಡೌನ್ಗೆ ಆದೇಶಿಸಿದ್ದರು. ಕೋವಿಡ್ ಪ್ರಕರಣ ಪತ್ತೆಯಾಗಿರುವುದನ್ನು ಉತ್ತರ ಕೊರಿಯಾದ ಸರ್ಕಾರ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಒಪ್ಪಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದ ಈವರೆಗೂ ಅದನ್ನು ನಿಯಂತ್ರಿಸುವಲ್ಲಿ ಸರ್ಕಾರ ಯಶಸ್ವಿಯಾಗಿತ್ತು.