ರಷ್ಯಾ- ಉಕ್ರೇನ್‌ ಯುದ್ಧ | ತೈಲ ಖರೀದಿಗೆ ಸಮರ್ಥನೆ ನೀಡಿದ ಜೈ ಶಂಕರ್‌; ಪುಟಿನ್‌ ಜೊತೆ ಝೆಲೆನ್‌ಸ್ಕಿ ಮಾತುಕತೆ

Ukraine-war
  • ತೈಲ ಮತ್ತು ಅನಿಲ ಖರೀದಿಯಲ್ಲಿ ಮೂರನೇ ಅತಿದೊಡ್ಡ ಗ್ರಾಹಕ
  • ಭಾರತ- ರಷ್ಯಾ ಮೊದಲಿನಿಂದಲೂ ಉತ್ತಮ ಸಂಬಂಧ ಹೊಂದಿದೆ

ಪ್ರಾದೇಶಿಕ ಜಾಗತಿಕ ಸಮಸ್ಯೆಗಳು, ಪರಸ್ಪರರ ಹಿತಾಸಕ್ತಿ ಹಾಗೂ ದ್ವಿಪಕ್ಷೀಯ ಸಹಕಾರ ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ರಷ್ಯಾದ ವಿದೇಶಾಂಗ ನಾಯಕರು ಮಂಗಳವಾರ ಮಾಸ್ಕೋದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಭಾರತೀಯ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್‌ ಅವರು ಮಾತುಕತೆಯಲ್ಲಿ ಭಾಗಿಯಾಗಿದ್ದರು. ಫೆಬ್ರವರಿಯಲ್ಲಿ ರಷ್ಯಾ ಮತ್ತು ಉಕ್ರೇನ್‌ ಸಂಘರ್ಷ ಆರಂಭವಾದ ನಂತರ ಉಭಯ ವಿದೇಶಾಂಗ ಸಚಿವರು ಈವರೆಗೂ ನಾಲ್ಕು ಬಾರಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Eedina App

ತೈಲ ಖರೀದಿ ಸರ್ಮರ್ಥಿಸಿಕೊಂಡ ಭಾರತ

ಭಾರತ ಮತ್ತು ರಷ್ಯಾ ಮೊದಲಿನಿಂದಲೂ ಉತ್ತಮ ಸಂಬಂಧ ಹೊಂದಿದ್ದು, ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಭಾರತ ನಿಜವಾಗಿಯೂ ಜಾಗತಿಕ ಆರ್ಥಿಕತೆಯ ಅಭಿವೃದ್ಧಿಗೆ ನೆರವಾಗುವ ಕೆಲಸ ಮಾಡುತ್ತಿದೆ.

AV Eye Hospital ad

"ತೈಲ ಮತ್ತು ಅನಿಲ ಖರೀದಿಯಲ್ಲಿ ಮೂರನೇ ಅತಿದೊಡ್ಡ ಗ್ರಾಹಕ ಎನಿಸಿರುವ ನಮ್ಮ ದೇಶದ ಆದಾಯವು ಹೆಚ್ಚಿಲ್ಲದ ಕಾರಣ, ನಾವು ಕೈಗೆಟಕುವ ದರದಲ್ಲಿ ಇಂಧನ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ರಷ್ಯಾ ಜೊತೆಗಿನ ಸಂಬಂಧ ಭಾರತಕ್ಕೆ ಲಾಭದಾಯಕ. ರಷ್ಯಾ ಜತೆಗೆ ನಮ್ಮ ಬಾಂಧವ್ಯವನ್ನು ಮುಂದುವರಿಸುತ್ತೇವೆ" ಎಂದು ಜೈಶಂಕರ್‌, ರಷ್ಯಾದಿಂದ ತೈಲ ಖರೀದಿ ಸಮರ್ಥಿಸಿಕೊಂಡಿದ್ದಾರೆ.

ಯುದ್ಧ ಕಾಲವಲ್ಲ ಎಂದ ಜೈಶಂಕರ್‌

ಸಮರ್ಕಂಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಹೇಳಿದಂತೆ, "ಇದು ಯುದ್ಧದ ಯುಗವಲ್ಲ. ನಾವು ಉಕ್ರೇನ್‌ ಮೇಲಿನ ಯುದ್ಧದ ಪರಿಣಾಮಗಳನ್ನು ನೋಡುತ್ತಿದ್ದೇವೆ. ಶಾಂತಿ ಮಾತುಕತೆಗೆ ಮರಳಲು ಭಾರತ ಸಲಹೆ ನೀಡುತ್ತದೆ. ಜಾಗತಿಕ ಆರ್ಥಿಕತೆಯು ಸಂಘರ್ಷಕ್ಕೆ ಸಿಲುಕಿದ್ದು, ಇದು ಪರಸ್ಪರ ಅವಲಂಬಿತವಾಗಿದೆ" ಎಂದು ಜೈಶಂಕರ್ ಅವರು ಮಾಸ್ಕೋದಲ್ಲಿ ಹೇಳಿದ್ದಾರೆ.

"ಅಂತಾರಾಷ್ಟ್ರೀಯ ಪರಿಸ್ಥಿತಿಗೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಿಂದ ಕೋವಿಡ್, ಹಣಕಾಸಿನ ಒತ್ತಡಗಳು ಮತ್ತು ವ್ಯಾಪಾರದ ತೊಂದರೆಗಳಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ಬಹಳ ಪರಿಣಾಮ ಉಂಟು ಮಾಡಿದೆ. ಉಕ್ರೇನ್ ಬಹಳ ನಷ್ಟ ಕೂಡ ಅನುಭವಿಸಿದೆ" ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನ | ನಟನೆಯಲ್ಲಿ ಶಾರುಖ್- ಸಲ್ಮಾನ್‌ ಮೀರಿಸುವ ಇಮ್ರಾನ್; ಪಾಕ್ ರಾಜಕಾರಣಿ ಫಝಲ್ಉರ್ ರೆಹ್ಮಾನ್ ಟೀಕೆ

"ಜಗತ್ತಿನಲ್ಲಿ ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಗಳು ಇವೆ. ಇವುಗಳು ದೀರ್ಘಕಾಲಿಕ ಸಮಸ್ಯೆಗಳು. ಇವೆರಡೂ ಪ್ರಗತಿ ಮತ್ತು ಸಮೃದ್ಧಿಯ ಮೇಲೆ ವಿಚ್ಛಿದ್ರಕಾರಕ ಪರಿಣಾಮ ಬೀರುತ್ತಿವೆ. ಈ ನಮ್ಮ ಮಾತುಕತೆಗಳು ಒಟ್ಟಾರೆ ಜಾಗತಿಕ ಪರಿಸ್ಥಿತಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಕಾಳಜಿ ಬಗ್ಗೆ ಆಗಿದೆ ಎಂದು ಜೈ ಶಂಕರ್‌ ಹೇಳಿದ್ದಾರೆ.

ಪುಟಿನ್‌ ಝೆಲೆನ್‌ಸ್ಕಿ ಮಾತುಕತೆ  ಸಾಧ್ಯತೆ

ಯುದ್ಧ ಆರಂಭವಾದಾಗಿನಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಲು ಉಕ್ರೇನ್‌ ನಿರಾಕರಿಸಿತ್ತು. ಇದೀಗ ಶಾಂತಿ ಮಾತುಕತೆ ನಡೆಸಲು ಉಕ್ರೇನ್‌ ಸಜ್ಜಾಗಿದೆ. 

ಅಮೆರಿಕದಲ್ಲಿ ನಡೆಯಲಿರುವ ಪ್ರಮುಖ ಚುನಾವಣೆಯ ಹಿನ್ನೆಲೆಯಲ್ಲಿ ಉಕ್ರೇನ್‌ ತಮ್ಮ ಹಳೆ ನಿಲುವು ಬದಲಿಸಿಕೊಂಡಿದ್ದು, ಪುಟಿನ್‌ ಜತೆಗೆ ಶಾಂತಿ ಮಾತುಕತೆ ನಡೆಸುವ ಸಾಧ್ಯತೆಯಿದೆ. 

ಸೋಮವಾರ ತಡವಾಗಿ ವಿಶ್ವ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ ಅವರು, "ರಷ್ಯಾವನ್ನು ನಿಜವಾದ ಶಾಂತಿ ಮಾತುಕತೆಗಳಿಗೆ ಮರಳುವಂತೆ ಒತ್ತಡ ಹೇರಬೇಕು" ಎಂದು ಒತ್ತಾಯಿಸಿದರು.

ರಷ್ಯಾ ಆಕ್ರಮಿಸಿಕೊಂಡಿರುವ ಉಕ್ರೇನ್‌ನ ಎಲ್ಲ ಭೂ ಪ್ರದೇಶಗಳನ್ನು ಹಿಂದಿರುಗಿಸಬೇಕು. ಯುದ್ಧದಿಂದ ಉಂಟಾದ ಹಾನಿ ಮತ್ತು ಯುದ್ಧ ಅಪರಾಧಗಳ ವಿಚಾರಣೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಝೆಲೆನ್‌ಸ್ಕಿ ಪುಟಿನ್‌ ಜತೆಗಿನ ಶಾಂತಿ ಮಾತುಕತೆಗೆ ಬೇಡಿಕೆಗಳನ್ನು ಪ್ರಸ್ತಾಪ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app