
ಬಿಳಿ ನಿಲುವಂಗಿ ಧರಿಸಿದ ಇಸ್ಲಾಂ ಆರಾಧಕರು ಪವಿತ್ರ ನಗರದ ಬೀದಿಗಳಲ್ಲಿ ತುಂಬಿದ್ದಾರೆ. ಹಜ್ ಯಾತ್ರೆಗೆ ಆಗಮಿಸುವ ಅಂತಾರಾಷ್ಟ್ರೀಯ ಸಂದರ್ಶಕರು, ಭಕ್ತರನ್ನು ಸ್ವಾಗತಿಸಲು ಸೌದಿ ಅರೆಬಿಯ ಬ್ಯಾನರ್ಗಳಿಂದ ಅಲಂಕೃತಗೊಂಡಿದೆ. ಶಸ್ತ್ರಸಜ್ಜಿತ ಭದ್ರತಾ ಪಡೆಗಳು ಪ್ರವಾದಿ ಮೊಹಮ್ಮದ್ ಅವರ ಜನ್ಮಸ್ಥಳವಾದ ಪ್ರಾಚೀನ ನಗರದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಕೋವಿಡ್ ನಂತರದ ಮೊದಲ ಹಜ್ ಯಾತ್ರೆ
2019ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಮೊದಲ ಬಾರಿಗೆ ಸೌದಿ ಅರೆಬಿಯದಲ್ಲಿ ಬುಧವಾರ ಅತಿದೊಡ್ಡ ಹಜ್ ಯಾತ್ರೆ ಆರಂಭವಾಗಿದ್ದು, ಕೋಟಿಗಟ್ಟಲೇ ಮಂದಿ ಆಗಮಿಸಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷಗಳಿಂದ ನಿರ್ಬಂಧಿಸಲಾಗಿದ್ದ ಹಜ್ ಯಾತ್ರೆ ಮತ್ತೆ ಆರಂಭಗೊಂಡಿದೆ. ಈ ವರ್ಷ 850,000 ವಿದೇಶಿಯರು ಸೇರಿದಂತೆ ಒಂದು ಕೋಟಿ ಜನರನ್ನು ಹಜ್ನಲ್ಲಿ ಅನುಮತಿಸಲಾಗಿದೆ. ಈ ತೀರ್ಥಯಾತ್ರೆಯು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದು, ಹಜ್ ಯಾತ್ರೆಯನ್ನು ಎಲ್ಲಾ ಮುಸ್ಲಿಮರು ಒಮ್ಮೆಯಾದರೂ ಕೈಗೊಳ್ಳಬೇಕೆಂದು ಇಸ್ಲಾಂನಲ್ಲಿ ನಂಬಿಕೆಯಿದೆ.
ಸೌದಿ ಅರೆಬಿಯಗೆ ಈವರೆಗೆ ಕನಿಷ್ಠ 650,000 ಸಾಗರೋತ್ತರ ಯಾತ್ರಿಕರು ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸೋಮವಾರ ಅಧಿಕಾರಿಗಳು ಅತಿಯಾದ ಜನಜಂಗುಳಿಯಾಗದಂತೆ ಸುಮಾರು 100,000 ಜನರನ್ನು ಮೆಕ್ಕಾಗೆ ಪ್ರವೇಶಿಸುವುದನ್ನು ತಡೆದರು. ಪವಿತ್ರ ನಗರದ ಸುತ್ತಲೂ ಭದ್ರತೆ ಬಿಗಿಗೊಳಿಸಲಾಗಿದೆ. ಪರವಾನಗಿ ಇಲ್ಲದೆ ಹಜ್ ಯಾತ್ರೆಗೆ ಯತ್ನಿಸಿದ 288 ಜನರನ್ನು ಬಂಧಿಸಿ ದಂಡ ವಿಧಿಸಲಾಗಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019ರಲ್ಲಿ, ಸುಮಾರು 2.5 ಕೋಟಿ ಜನರು ಹಜ್ಯಾತ್ರೆಯ ವಿವಿಧ ಆಚರಣೆಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ ಮೌಂಟ್ ಅರಾಫತ್ ಮತ್ತು ಮಿನಾದಲ್ಲಿ 'ದೆವ್ವದ ಮೇಲೆ ಕಲ್ಲೆಸೆಯುವ' ಆಚರಣೆಯೂ ಸೇರಿದೆ.
ಈ ಸುದ್ದಿ ಓದಿದ್ದೀರಾ?: ಅಮೆರಿಕದಲ್ಲಿ ಸ್ವಾತಂತ್ರ್ಯ ದಿನದ ಪಥಸಂಚಲನದ ವೇಳೆ ಗುಂಡಿನ ದಾಳಿ; ಆರು ಮಂದಿ ಸಾವು, 24 ಮಂದಿಗೆ ಗಾಯ
ಹಜ್ ಯಾತ್ರೆ ಅವಕಾಶಕ್ಕೆ ಸಂಭ್ರಮ
2021ರಲ್ಲಿ ಸಾಂಕ್ರಾಮಿಕ ರೋಗದ ಜಾಗತಿಕ ಸೂಪರ್ ಸ್ಪ್ರೆಡರ್ ಆಗಿ ಹಜ್ ಬದಲಾಗುವ ಭೀತಿಯಲ್ಲಿ ವಿದೇಶಿಯರನ್ನು ನಿರ್ಬಂಧಿಸಲಾಗಿತ್ತು. ಆರಾಧಕರನ್ನು ಕೇವಲ 10,000ಕ್ಕೆ ಇಳಿಸಲಾಗಿತ್ತು. ಲಸಿಕೆ ಪಡೆದ 60,000 ಸೌದಿ ನಾಗರಿಕರು ಮತ್ತು ನಿವಾಸಿಗಳಿಗೆ ಪ್ರವೇಶ ನೀಡಲಾಗಿತ್ತು. ಈ ವರ್ಷ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದ್ದರೂ, 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾತ್ರಾರ್ಥಿಗಳನ್ನು ಮಾತ್ರ ಅನುಮತಿಸಲಾಗಿದೆ, ಕಟ್ಟುನಿಟ್ಟಾದ ಭದ್ರತೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಇದೊಂದು ಮೆರೆಯಲಾಗದ ಸಂತೋಷ ಕ್ಷಣ. ನಾನು ಇಲ್ಲಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದೇನೆ" ಎಂದು ಸೂಡಾನ್ ಯಾತ್ರಿಕ ಅಬ್ದುಲ್ ಖಾದರ್ ಮೆಕ್ಕಾಗೆ ಭೇಟಿ ನೀಡಿದ ನಂತರ ಅಭಿಪ್ರಾಯಪಟ್ಟಿರುವುದಾಗಿ ಎಎಫ್ಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
"ನಾನು ಮೊದಲು ಕಾಬಾ ನೋಡಿದಾಗ ಏನೋ ವಿಚಿತ್ರ ಅನಿಸಿತು ಮತ್ತು ಅಳಲು ಪ್ರಾರಂಭಿಸಿದೆ" ಎಂದು ಈಜಿಪ್ಟ್ ಯಾತ್ರಿಕ ಮೊಹಮ್ಮದ್ ಲೊಟ್ಫಿ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಕಾಬಾ ಸುಮಾರು 15 ಮೀಟರ್ (50 ಅಡಿ) ಎತ್ತರವಿದೆ. ಇದು ಪ್ರಪಂಚದ ಎಲ್ಲೇ ಇದ್ದರೂ, ಎಲ್ಲಾ ಮುಸ್ಲಿಮರು ಪ್ರಾರ್ಥಿಸುವ ಸ್ಥಳ. ಅದರ ಕಟ್ಟಡಗಳನ್ನು ಗ್ರಾನೈಟ್ನಿಂದ ತಯಾರಿಸಲಾಗಿದ್ದು, ಕುರಾನ್ ಸಾಲುಗಳಿರುವಗ ಬಟ್ಟೆಯಲ್ಲಿ ಹೊದಿಕೆ ಹಾಸಲಾಗಿದೆ.
ಮುಖ್ಯ ಮಸೀದಿಯಲ್ಲಿ ಬಿಗಿ ಭದ್ರತೆ
ಇಸ್ಲಾಂನ ಅತ್ಯಂತ ಪವಿತ್ರ ಸ್ಥಳವಾದ 'ಗ್ರ್ಯಾಂಡ್ ಮಸೀದಿ'ಯಲ್ಲಿ ಮಾಸ್ಕ್ ಕಡ್ಡಾಗೊಳಿಸಲಾಗಿದೆ. ವಿದೇಶದಿಂದ ಬರುವ ಯಾತ್ರಿಕರು ಪಿಸಿಆರ್ ಪರೀಕ್ಷೆಯ ಫಲಿತಾಂಶ ಸಲ್ಲಿಸಬೇಕಾಗುತ್ತದೆ. ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.
"ಗ್ರ್ಯಾಂಡ್ ಮಸೀದಿಯನ್ನು ದಿನಕ್ಕೆ 10 ಬಾರಿ 4,000ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಕೆಲಸಗಾರರು ತೊಳೆಯುತ್ತಾರೆ. ಪ್ರತಿ ಬಾರಿ 130,000 ಲೀಟರ್ಗಳಿಗಿಂತ ಹೆಚ್ಚು (34,000 ಗ್ಯಾಲನ್ಗಳು) ಸೋಂಕು ನಿವಾರಕ ಬಳಸಲಾಗುತ್ತದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಜ್ ಯಾತ್ರೆ ಸಮಯದಲ್ಲಿ ವಿಪತ್ತು
ಹಜ್ ಯಾತ್ರೆಯಲ್ಲಿ ಹಲವು ಬಾರಿ ವಿಪತ್ತು ಸಂಭವಿಸಿದೆ. 2015ರಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ 2,300 ಜನರು ಬಲಿಯಾಗಿದ್ದರು. 1979ರಲ್ಲಿ ನಡೆದ ಬಂದೂಕು ದಾಳಿಯಲ್ಲಿ 153 ಮಂದಿ ಸಾವನ್ನಪಿದ್ದರು.
ಸೌದಿ ಅರೆಬಿಯದ ಪ್ರತಿಷ್ಠೆಯ ಸಂಕೇತ
ಹಜ್ ಯಾತ್ರೆಗೆ ತೆರಳಲು ಪ್ರತಿವ್ಯಕ್ತಿಗೆ ಕನಿಷ್ಠ 5 ಲಕ್ಷ ಖರ್ಚಾಗುತ್ತದೆ. ವಿಶ್ವದ ಅತಿದೊಡ್ಡ ತೈಲ ರಫ್ತುದಾರನಾಗಿರುವ ಸೌದಿಗೆ ಹಜ್ ಯಾತ್ರೆಯಿಂದ ಆರ್ಥಿಕ ಲಾಭ ಶತಕೋಟಿ ಡಾಲರ್ನಷ್ಟಿದೆ. ಸಂಪ್ರದಾಯಶೀಲ ಮರುಭೂಮಿಯೇ ತುಂಬಿರುವ ಸಾಮ್ರಾಜ್ಯವಾದ ಸೌದಿಯಯ ವಾಸ್ತವಿಕ ಆಡಳಿತಗಾರ ರಾಜಕುವರ ಮೊಹಮ್ಮದ್ ಬಿನ್ ಸಲ್ಮಾನ್ಗೆ ಈ ಬಾರಿಯ ಹಜ್ ಯಾತ್ರೆ ಪ್ರತಿಷ್ಠೆಯ ಸಂಕೇತವಾಗಿದೆ.
ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಮೇಲಿನ ಮಿತಿಗಳ ಬಗ್ಗೆ ನಿರಂತರ ದೂರುಗಳ ಹೊರತಾಗಿಯೂ, ಸಾಮ್ರಾಜ್ಯದ ತ್ವರಿತ ಸಾಮಾಜಿಕ ಪರಿವರ್ತನೆಯನ್ನು ಪ್ರದರ್ಶಿಸಲು ಹಜ್ ಯಾತ್ರೆ ಸೌದಿ ಅರೆಬಿಯಕ್ಕೆ ಒಂದು ಅವಕಾಶವಾಗಿದೆ. ಹಜ್ ಯಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತದೆ.
ಸೌದಿ ಅರೆಬಿಯಾ ಈಗ ಮಹಿಳೆಯರಿಗೆ ಪುರುಷ ಸಂಬಂಧಿಗಳ ಜೊತೆಯಿಲ್ಲದೆ ಹಜ್ಗೆ ಹಾಜರಾಗಲು ಅವಕಾಶ ನೀಡಿದೆ. ಮಹಿಳೆಯರಿಗೆ ಅವಕಾಶವಿಲ್ಲವೆಂಬ ನಿಯಮವನ್ನು ಕಳೆದ ವರ್ಷ ಕೈಬಿಡಲಾಯಿತು.
ಬಿಸಿ ತಾಪಮಾನ ಹೊಂದಿರುವ ಸೌದಿ
ಕೋವಿಡ್ನ ಹೊರತಾಗಿ, ಸೌದಿ ಅರೆಬಿಯಾದ ಕೆಲವು ಭಾಗಗಳಲ್ಲಿ ತಾಪಮಾನವು ಈಗಾಗಲೇ 50 ಡಿಗ್ರಿ ಸೆಲ್ಸಿಯಸ್ (122 ಫ್ಯಾರನ್ಹೀಟ್) ತಲುಪಿದೆ. ವಿಶ್ವದ ಅತ್ಯಂತ ಬಿಸಿ ಮತ್ತು ಶುಷ್ಕ ಪ್ರದೇಶವೆಂದು ಇದನ್ನು ಕರೆಯಲಾಗಿದೆ. ಸುಡುವ ಸೂರ್ಯ ಹಜ್ ಯಾತ್ರಿಕರಿಗೆ ಮತ್ತೊಂದು ಸವಾಲಾಗಿದೆ.
ಆದರೆ ಇರಾಕ್ನ ಯಾತ್ರಾರ್ಥಿ ಅಹ್ಮದ್ ಅಬ್ದುಲ್- ಹಸನ್ ಅಲ್- ಫತ್ಲಾವಿ ಅವರು ಮೆಕ್ಕಾದಲ್ಲಿದ್ದಾಗ ಇದು ನನ್ನ ಕೊನೆಯ ಪ್ರಾರ್ಥನೆ ಎಂದು ಹೇಳಿದ್ದಾರೆ. "ನನಗೆ 60 ವರ್ಷ, ಆದ್ದರಿಂದ ಬಿಸಿ ವಾತಾವರಣದಿಂದ ದೈಹಿಕವಾಗಿ ದಣಿದಿದ್ದರೆ ಅದು ಸಹಜ, ಆದರೆ ನಾನು ಶಾಂತಿಯನ್ನು ಕಂಡುಕೊಂಡೆ. ಅದೇ ಮುಖ್ಯ" ಎಂದು ಅವರು ತಿಳಿಸಿದ್ದಾರೆ.
ಸೌದಿ ಅರೆಬಿಯಗೆ ಜೋ ಬೈಡನ್
ಹಜ್ ಮುಗಿದ ಕೆಲವು ದಿನಗಳ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ರಾಜಕುವರ ಮೊಹಮ್ಮದ್ ಸ್ವಾಗತಿಸಲಿದ್ದಾರೆ. ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದ ತೈಲ ಬೆಲೆಗಳು ಗಗನಕ್ಕೇರಿದ್ದು, 2018ರಲ್ಲಿ ಹತ್ಯೆಯಾದ ಪತ್ರಕರ್ತ ಜಮಾಲ್ ಖಶೋಗಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.