
ಟರ್ಕಿ ರಾಷ್ಟ್ರದ ಸಂಸತ್ತು ಹಾಗೂ ನೂತನ ಅಧ್ಯಕ್ಷರ ಆಯ್ಕೆಗೆ ಮೇ 14ರಂದು ಚುನಾವಣೆ ನಡೆಯಲಿದೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ ಎಂದು ಸೋಮವಾರ (ಜ.23) ಮಾಧ್ಯಮಗಳು ವರದಿ ಮಾಡಿವೆ.
ಬುರ್ಸಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಯುವಜನರ ಸಮ್ಮೇಳನದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಭಾನುವಾರ (ಜ.22) ಬಿಡುಗಡೆ ಮಾಡಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿದೆ.
ಎರ್ಡೊಗನ್ ಅವರು ಮರು ಆಯ್ಕೆಯಾಗಲಿದ್ದಾರೆ ಎಂದು ಅದಿಕೃತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. “ಮೇ 14ರ ಚುನಾವಣೆಯಲ್ಲಿ ಇದೇ ಪ್ರಥಮ ಬಾರಿಗೆ ಮತದಾನದ ಹಕ್ಕು ಚಲಾವಣೆ ಮಾಡಲಿರುವ ಯುವ ಸಮೂಹದ ಜೊತೆಗೆ ಈ ವಿಷಯ ಹಂಚಿಕೊಳ್ಳುತ್ತಿದ್ದೇನೆ. ಈ ಅವಕಾಶ ದೊರೆತಿರುವುದಕ್ಕೆ ಸಂತಸವಾಗಿದೆ” ಎಂದು ಎರ್ಡೊಗನ್ ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.
“ಮಾರ್ಚ್ 10ರಂದು ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಮಾಡುತ್ತೇನೆ. ಬಳಿಕ ಚುನಾವಣಾ ಮಂಡಳಿ ಸಿದ್ಧತೆ ಆರಂಭಿಸಲಿದೆ. ಯಾವುದೇ ಅಭ್ಯರ್ಥಿ ಶೇ 50ಕ್ಕಿಂತಲೂ ಹೆಚ್ಚುಮತ ಗಳಿಸದಿದ್ದಲ್ಲಿ ಎರಡನೇ ಸುತ್ತಿನ ಮತದಾನ ಮೇ 28ರಂದು ನಡೆಯಲಿದೆ” ಎಂದು ಹೇಳಿದರು. ಎರ್ಡೊಗನ್ 2003ರಿಂದ ಟರ್ಕಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದಾರೆ.