ವಿಶ್ವಸಂಸ್ಥೆ ಮಾನವ ಹಕ್ಕು ಆಯೋಗ | ಶ್ರೀಲಂಕಾ ವಿರುದ್ಧ ಮೊದಲ ಬಾರಿಗೆ ಧ್ವನಿ ಎತ್ತಿದ ಭಾರತ

  • ಚೀನಾ ವಿರುದ್ಧ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ
  • ತಮಿಳರ ನ್ಯಾಯ, ಘನತೆ ಹಾಗೂ ಶಾಂತಿಗೆ ಪ್ರಯತ್ನಿಸಬೇಕು

ಶ್ರೀಲಂಕಾದಲ್ಲಿ ಬುಡಕಟ್ಟು ತಮಿಳರ ಸಮಸ್ಯೆಗಳಿಗೆ ರಾಜಕೀಯ ಪರಿಹಾರ ಒದಗಿಸುವ ಕುರಿತು ಶ್ರೀಲಂಕಾ ಸರ್ಕಾರದ ನಡೆಯ ವಿರುದ್ಧ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ ಸಭೆಯಲ್ಲಿ ಭಾರತ ಧ್ವನಿ ಎತ್ತಿದೆ.

ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯ ಸಂಪೂರ್ಣ ಅನುಷ್ಠಾನದ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸುವ ಲಂಕಾ ಸರ್ಕಾರದ ಬದ್ಧತೆಯ ವಿಚಾರದಲ್ಲಿ ಯಾವುದೇ ಬೆಳವಣಿಗೆ ಕಾಣಿಸುತ್ತಿಲ್ಲ. ದ್ವೀಪ ರಾಷ್ಟ್ರ ತನ್ನ ಬದ್ಧತೆಯನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ.

ಭಾರತದ ಆಕ್ಷೇಪದ ಹೊರತಾಗಿಯೂ ಚೀನಾದ ಬೇಹುಗಾರಿಕೆ ಹಡಗು ಶ್ರೀಲಂಕಾದ ಹಂಬಂತೋಟ ಬಂದರಿನಲ್ಲಿ ಲಂಗರು ಹಾಕಲು ಶ್ರೀಲಂಕಾ ಸರ್ಕಾರ ಅವಕಾಶ ಮಾಡಿಕೊಟ್ಟ ಕಾರಣದಿಂದಾಗಿ ಶ್ರೀಲಂಕಾ ಸರ್ಕಾರದ ವಿರುದ್ಧ ಭಾರತ ಸಾರ್ವಜನಿಕವಾಗಿ ಆಕ್ಷೇಪಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಸುದ್ದಿ ಓದಿದ್ದೀರಾ? ರಾಣಿ ಎಲಿಝಬೆತ್ ಸಾವು | 'ಚಾರ್ಲ್ಸ್‌ ನಮ್ಮ ರಾಜನಲ್ಲ' ಎಂದು ಘೋಷಿಸಿ ಗಣರಾಜ್ಯಕ್ಕೆ ಸಿದ್ಧವಾದ ಕಾಮನ್‌ವೆಲ್ತ್ ದ್ವೀಪ ರಾಷ್ಟ್ರಗಳು

ಶ್ರೀಲಂಕಾದ ಮಾನವಹಕ್ಕು ಸ್ಥಿತಿಗೆ ಸಂಬಂಧಿಸಿ ಭಾರತದ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲವಾದರೂ, ಶ್ರೀಲಂಕಾ ತಮಿಳರ ನ್ಯಾಯ, ಘನತೆ ಮತ್ತು ಶಾಂತಿ ವಿಚಾರಕ್ಕೆ ಬೆಂಬಲ ನೀಡುವುದು ಮತ್ತು ಶ್ರೀಲಂಕಾದ ಏಕತೆ, ಸ್ಥಿರತೆ ಮತ್ತು ಸಮಗ್ರತೆಯನ್ನು ಬೆಂಬಲಿಸುವುದು ಭಾರತದ ಎರಡು ಪ್ರಮುಖ ಪರಿಗಣನೆ ಅಂಶಗಳಾಗಿವೆ ಎಂದು ಭಾರತದ ಉನ್ನತ ಮೂಲಗಳು ತಿಳಿಸಿವೆ.

ಚೀನಾ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿರುವ ಭಾರತ, ನಮ್ಮ ದೇಶದ ಮೇಲೆ ಬೇಹುಗಾರಿಕೆ ನಡೆಸಲು ಚೀನಾ ಪ್ರಯತ್ನಿಸುತ್ತಿದೆ. ಇದು ನಮ್ಮ ಸಾರ್ವಭೌಮತೆಗೆ ಅಡ್ಡಿಯಾಗಿದೆ ಎಂದು ಹೇಳಿದೆ.

ಶ್ರೀಲಂಕಾದ ಹಂಬಂಟೋಟಾ ಬಂದರಿನಲ್ಲಿ ಹಡಗಿನ ಮೂಲಕ ಬೇಹುಗಾರಿಕೆ ನಡೆಸುವ ಚೀನಾ ಪ್ರಯತ್ನಕ್ಕೆ ಭಾರತ ಆಕ್ಷೇಪಿಸಿತ್ತು. ಇದಲ್ಲದೇ "ಬಿಕ್ಕಟ್ಟಿನಲ್ಲಿರುವ ಲಂಕಾಗೆ ಅಗತ್ಯವಿರುವುದು ಆರ್ಥಿಕ ಸಹಕಾರವೇ ಹೊರತು ವಿವಾದಗಳಲ್ಲ. ಚೀನಾ ಸಹ ಕೋವಿಡ್‌ ಸಾಂಕ್ರಾಮಿಕ ಒತ್ತಡದಿಂದ ಬಳಲುತ್ತಿದ್ದು, ಅದರ ಕಡೆ ಗಮನಹರಿಸಿ ಭಾರತದ ಮೇಲೆ ಬೇಹುಗಾರಿಕೆ ಮಾಡಬೇಡಿ ಎಂದು ಭಾರತದ ವಿದೇಶಾಂಗ ಇಲಾಖೆ  ಕುಟುಕಿತ್ತು.

ಭಾರತದ ವಿಚಾರದಲ್ಲಿ ಶ್ರೀಲಂಕಾ ಮತ್ತು ಬೀಜಿಂಗ್‌ ನಡೆ ಸರಿಯಾದುದಲ್ಲ. ಅನಗತ್ಯ ವಿಷಯಗಳ ಬದಲು ದೇಶದ ಆರ್ಥಿಕತೆ ಕಡೆಗೆ ಗಮನ ಕೊಡಿ ಎಂದು ಭಾರತ ಎಚ್ಚರಿಕೆ ರವಾನಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್