ಯುದ್ಧದಿಂದಾಗಿ ಉಕ್ರೇನ್‌ನಲ್ಲಿ ಎಲ್ಲವೂ ನಾಶವಾಗಿದೆ: ರೈತನ ಅಳಲು

  • ಉಕ್ರೇನ್‌ ಯುದ್ಧದಿಂದಾಗಿ ಜಗತ್ತಿಗೆ ಆಹಾರ ಸಂಕಷ್ಟ
  • 1.5 ಶತಕೋಟಿ ಧಾನ್ಯ ರಫ್ತು ಕಳೆದುಕೊಂಡಿದೆ ಉಕ್ರೇನ್‌

ಉಕ್ರೇನ್‌- ರಷ್ಯಾ ಯದ್ಧವು ಜಾಗತಿಕವಾಗಿ ಹಲವು ಪರಿಣಾಮ ಬೀರಿದೆ. ಈ ಯುದ್ಧದಿಂದಾಗಿ ಆಹಾರ ಉತ್ಪಾದನೆಯಿಂದ ಆಹಾರ ಬೆಲೆಗಳವರೆಗೆ ಎಲ್ಲವೂ ಏರಿವೆ. ಕಳೆದ ಆರು ವಾರಗಳಲ್ಲಿ ರಷ್ಯಾ ಸೇನೆ ಉಕ್ರೇನಿನ ಮನೆಗಳು, ಆಸ್ಪತ್ರೆಗಳು ಹಾಗೂ ಶಾಲೆಗಳನ್ನು ನಾಶಪಡಿಸಿದೆ.

ಯುದ್ಧದಿಂದಾಗಿ ಕೃಷಿ ಭೂಮಿ ನಾಶಗೊಂಡಿದೆ. ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್ ಈಗಾಗಲೇ ಕನಿಷ್ಠ $1.5 ಶತಕೋಟಿ ಧಾನ್ಯ ರಫ್ತುಗಳನ್ನು ಕಳೆದುಕೊಂಡಿದೆ ಎಂದು ಉಕ್ರೇನ್‌ ಕೃಷಿ ಸಚಿವರು ಇತ್ತೀಚೆಗೆ ಹೇಳಿದ್ದಾರೆ.

ವಿದೇಶಗಳಿಗೆ ರಪ್ತು ಮಾಡುವ ಗೋದಾಮುಗಳನ್ನು ರಷ್ಯಾ ನಾಶಪಡಿಸಿದೆ. ಮಂಗಳವಾರ ನಡೆದ ಸೆಲ್‌ ದಾಳಿಯಿಂದಾಗಿ ಆರು ದೊಡ್ಡ ಕೃಷಿ ಗೋದಾಮುಗಳು ನಾಶವಾಗಿವೆ ಎಂದು ಉಕ್ರೇನ್‌ನ ಕೃಷಿ ಸಚಿವಾಲಯ ಹೇಳಿದೆ.

ರಷ್ಯಾ ದಾಳಿಯಿಂದ ಜಮೀನು ನಾಶ 

"ನಾನು ಈ ಯುದ್ಧದಲ್ಲಿ ಜಮೀನು ಕಳೆದುಕೊಂಡಿದ್ದೇನೆ. ರಷ್ಯಾದ ಸೆಲ್‌ಗಳು ಮತ್ತು ರಾಕೆಟ್‌ ದಾಳಿಯಿಂದಾಗಿ ನಾನು ಸಾಕಿದ್ದ ಹಸುಗಳು ಸಾವನ್ನಪ್ಪಿವೆ. ನಮ್ಮ ಹಳ್ಳಿ ಪಾಳು ಬಿದ್ದಿದೆ" ಎಂದು ಉತ್ತರ ಉಕ್ರೇನಿನ ನಗರವಾದ ಚೆರ್ನಿಹಿವ್ ಬಳಿಯ ಲುಕಾಶಿವ್ಕಾ ಗ್ರಾಮದ ರೈತ ಗ್ರಿಗೊರಿ ಟ್ಕಾಚೆಂಕೊ ಮಾಧ್ಯಮಗಳ ಮುಂದೆ ತಮ್ಮ ನೋವನ್ನು ತೊಡಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೇಳುವರಿಲ್ಲ ಕಾರ್ಮಿಕರ ಗೋಳಾಟ

"ಇತ್ತೀಚಿಗೆ ನಾವು ಕಟ್ಟಡ ಕಟ್ಟುತ್ತಿದ್ದ ಪ್ರದೇಶದಲ್ಲಿ ರಾಕೆಟ್‌ ದಾಳಿಗಳು ಆರಂಭವಾದವು. ಭಯದಿಂದ ರಕ್ಷಣೆಗಾಗಿ ಮತ್ತೊಂದು ಕಟ್ಟಡಕ್ಕೆ ಓಡಿದ್ದೆವು. ದಾಳಿಯು ಕೊನೆಗೊಂಡಾಗ ನಾವು ಕಟ್ಟುತ್ತಿದ್ದ ಕಟ್ಟಡ ಸಂಪೂರ್ಣ ನಾಶವಾಗಿತ್ತು. ನಾವು ದಶಕಗಳಿಂದ ನಿರ್ಮಿಸಿದ್ದನ್ನು ಅವರು ಕೆಲವೇ ದಿನಗಳಲ್ಲಿ ನಾಶಪಡಿಸಿದರು" ಎಂದು ಸ್ಥಳೀಯ ಕಾರ್ಮಿಕರು ಹೇಳಿದ್ದಾರೆ.

ಜಾಗತಿಕ ಆಹಾರ ಮಾರುಕಟ್ಟೆಯಲ್ಲಿ ಉಕ್ರೇನ್‌ ಪಾಲು

ಉಕ್ರೇನ್‌ ದೇಶದ 70%ರಷ್ಟು ಕೃಷಿಭೂಮಿಯನ್ನು ಹೊಂದಿದೆ. ಕೃಷಿ ಉತ್ಪನ್ನಗಳು ಉಕ್ರೇನ್‌ನ ಅತ್ಯಧಿಕ ರಫ್ತು ಪದಾರ್ಥಗಳಾಗಿವೆ. ಒಟ್ಟು ದೇಶೀಯ ಉತ್ಪನ್ನ ಸುಮಾರು 10% ರಷ್ಟಿದೆ. ಜೋಳ ಮತ್ತು ಗೋಧಿಯನ್ನು ಉಕ್ರೇನ್ ಹೆಚ್ಚಾಗಿ ರಪ್ತು ಮಾಡುತ್ತದೆ. ಸೂರ್ಯಕಾಂತಿ ಎಣ್ಣೆಯ ಅತಿದೊಡ್ಡ ರಫ್ತುದಾರನಾಗಿದೆ.

ಉಕ್ರೇನ್‌ ಪ್ರಸ್ತುತ 13 ಕೋಟಿ ಟನ್ ಗೋಧಿ ದಾಸ್ತಾನು ಹೊಂದಿದೆ. ದೇಶದ ಸಾಮಾನ್ಯ ಮಾರ್ಗಗಳನ್ನು ಬಳಸಿಕೊಂಡು ರಫ್ತು ಮಾಡಲು ಸಾಧ್ಯವಿಲ್ಲ. ಸಮುದ್ರದ ಮೂಲಕ ರಪ್ತು ಮಾಡಬೇಕು. ಅದನ್ನು ರಷ್ಯಾ ಈಗಾಗಲೇ ನಾಶ ಮಾಡಿದೆ ಎಂದು ಉಕ್ರೇನ್‌ನ ಕೃಷಿ ಸಚಿವಾಲಯ ಹೇಳಿದೆ.

ರಷ್ಯಾ ದಾಳಿಯ ಮೊದಲು ಒಬ್ಬ ರೈತ 1,500 ಟನ್ ಧಾನ್ಯ ಮತ್ತು 1,000 ಟನ್ ಜೋಳವನ್ನು ಬೆಳೆಯುತ್ತಿದ್ದ. ಈದೀಗ ಅವೆಲ್ಲವೂ ನಾಶವಾಗಿದೆ.
ಪ್ರಪಂಚಕ್ಕೆ ಸೂರ್ಯಕಾಂತಿ ಬೀಜಗಳನ್ನು ರಪ್ತು ಮಾಡುವ ದೇಶ ಉಕ್ರೇನ್. ಇಂಧನ, ರಸಗೊಬ್ಬರ ಮುಂತಾದ ಪದಾರ್ಥಗಳೂ ಉಕ್ರೇನ್‌ನಿಂದ ರಪ್ತು ಆಗುತ್ತಿವೆ.

ಯುದ್ಧದಿಂದ ಜಾಗತಿಕ ಆಹಾರ ಬಿಕ್ಕಟ್ಟು

ಮತ್ತೊಂದೆಡೆ, ವಿಶ್ವದ ಪ್ರಮುಖ ಧಾನ್ಯ ರಫ್ತುದಾರ ರಷ್ಯಾ, ಅಂತಾರಾಷ್ಟ್ರೀಯ ನಿರ್ಬಂಧಗಳಿಂದಾಗಿ ಆಹಾರ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದು ಜಾಗತಿಕ ಆಹಾರ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ.

ಎರಡನೇ ವಿಶ್ವಯುದ್ಧದ ನಂತರ ಮೊದಲ ಬಾರಿಗೆ ವಿಶ್ವ ಆಹಾರದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್