ಈ ಜಗತ್ತು | ದಶಕದ ಹಿಂದೆಯೇ ಸಿದ್ಧವಾಗಿದ್ದ ಎಲಿಜಬೆತ್‌ ಶವಪೆಟ್ಟಿಗೆ

  • ಕ್ಷಾಮದಿಂದ ತತ್ತರಿಸಿದ ನಾಗರಿಕರು
  • ವಿಮಾನ ನಿಲ್ದಾಣದಲ್ಲಿ ಖೈದಿಗಳ ವಿನಿಮಯ
Image

ಬ್ರಿಟನ್‌

ದಶಕದ ಹಿಂದೆಯೇ ಸಿದ್ಧವಾಗಿದ್ದ ಶವಪೆಟ್ಟಿಗೆ

ಬ್ರಿಟನ್‌ ರಾಣಿ ಎಲಿಜಬೆತ್‌ ಪಾರ್ಥಿವ ಶರೀರ ಇರಿಸಲಾಗಿದ್ದ ಶವಪೆಟ್ಟಿಗೆಯನ್ನು ದಶಕದ ಹಿಂದೆಯೇ ಸಿದ್ಧಪಡಿಸಲಾಗಿತ್ತು ಎಂದು ವರದಿಯಾಗಿದೆ. ಸ್ಯಾಂಡ್ರಿಂಗ್‌ಹ್ಯಾಮ್‌ ಎಸ್ಟೇಟ್‌ನಲ್ಲಿ ಬೆಳೆಸಿದ್ದ ಓಕ್‌ ಮರ ಬಳಸಿಕೊಂಡು ಶವಪೆಟ್ಟಿಗೆ ನಿರ್ಮಾಣ ಮಾಡಲಾಗಿತ್ತು. ಅಂತ್ಯಕ್ರಿಯೆಗೂ ಮುನ್ನ, ರಾಜ ಚಾರ್ಲ್ಸ್ III ಅವರ ಕೈಬರಹದ ಪತ್ರವನ್ನು ಶವಪೆಟ್ಟಿಗೆ ಮೇಲೆ ಇರಿಸಲಾಗಿತ್ತು. "ಪ್ರೀತಿ ಮತ್ತು ಭಕ್ತಿಯ ಸ್ಮರಣೆಯೊಂದಿಗೆ" ಎಂದು ಚಾರ್ಲ್ ಬರೆದಿದ್ದರು. ಈ ಶವಪೆಟ್ಟಿಗೆಯನ್ನು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು.

Image

ಅಫ್ಘಾನಿಸ್ತಾನ

ಅಮೆರಿಕದ ಇಂಜಿನಿಯರ್ ಬಿಡುಗಡೆ ಮಾಡಿದ ತಾಲಿಬಾನ್

ಖೈದಿಗಳ ವಿನಿಮಯ ವ್ಯವಸ್ಥೆಯಡಿ ಅಫ್ಘಾನಿಸ್ತಾನದ ತಾಲಿಬಾನ್ ತನ್ನ ವಶದಲ್ಲಿದ್ದ ಅಮೆರಿಕದ ಇಂಜಿನಿಯರ್ ಮಾರ್ಕ್ ಫ್ರೆರಿಚ್‍ರನ್ನು ಬಿಡುಗಡೆಗೊಳಿಸಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ 2005ರಿಂದಲೂ ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧನದಲ್ಲಿದ್ದ ಅಫ್ಘಾನ್ ಬುಡಕಟ್ಟು ಮುಖಂಡ ಬಶೀರ್ ನೂರ್ಝಾಯಿಯನ್ನು ಬಿಡುಗಡೆಗೊಳಿಸಿದೆ ಎಂದು ತಾಲಿಬಾನ್‍ನ ವಿದೇಶಾಂಗ ಸಚಿವರು ಹೇಳಿದ್ದಾರೆ.

ಕಾಬೂಲ್‍ನ ವಿಮಾನ ನಿಲ್ದಾಣದಲ್ಲಿ ಖೈದಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಅಫ್ಘಾನ್‍ನ ವಿದೇಶಾಂಗ ಸಚಿವ ಅಮೀರ್‍ಖಾನ್ ಮುತ್ತಖಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಮೆರಿಕ ಮತ್ತು ಯುರೋಪ್‍ಗೆ 50 ಮಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಹೆರಾಯಿನ್‌ ಅನ್ನು ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ನೂರ್‍ಝಾಯಿಯನ್ನು 2005ರಲ್ಲಿ ಅಮೆರಿಕ ಬಂಧಿಸಿತ್ತು.

Image

ಆಫ್ರಿಕಾ

ಕ್ಷಾಮದಿಂದ ತತ್ತರಿಸಿದ ನಾಗರಿಕರು

ಹಾರ್ನ್‌ ಆಫ್‌ ಆಫ್ರಿಕಾ ಒಂದು ವರ್ಷದಲ್ಲಿ ಎರಡನೇ ಬಾರಿ ಕ್ಷಾಮಕ್ಕೆ ಒಳಗಾಗಿದೆ. 40 ವರ್ಷಗಳಲ್ಲಿ ಭೀಕರ ಬರಗಾಲಕ್ಕೆ ತುತ್ತಾಗಿದೆ. ಅನೇಕ ಜಾನುವಾರುಗಳು ನಾಶವಾಗಿದ್ದು, ನಾಗರಿಕರು ಆಹಾರವಿಲ್ಲದೇ ಪರಡಾಡುತ್ತಿದ್ದಾರೆ.

ಉಕ್ರೇನ್‌ ಯುದ್ಧ, ಕೋವಿಡ್‌ ಆಫ್ರಿಕದ ನಾಗರಿಕ ಯುದ್ಧ ಮುಂತಾದ ಕಾರಣಗಳಿಂದ ಆಫ್ರಿಕ ನಾಗರಿಕರು ಹಸಿವಿನಿಂದ ಕಂಗಲಾಗಿದ್ದಾರೆ. 2011ಕ್ಕೆ ಹೋಲಿಸಿದರೆ ಈ ವರ್ಷದ ಕ್ಷಾಮವು ಭಯಾನಕವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ  ಮಾರ್ಟಿನ್ ಗ್ರಿಫಿತ್ಸ್ ಹೇಳಿದ್ದಾರೆ.

Image

ಅಮೆರಿಕ 

ಪರಮಾಣು ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ

ಪರಮಾಣು ಒಪ್ಪಂದದ ವಿಷಯದಲ್ಲಿ ಅಮೆರಿಕ ಹಿಂದೆ ಸರಿಯುವುದಿಲ್ಲ ಎಂದು ಖಚಿತಪಡಿಸಿದರೆ ಪರಮಾಣು ಒಪ್ಪಂದದ ಮರುಸ್ಥಾಪನೆಯ ಬಗ್ಗೆ ಇರಾನ್ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇರಾನ್‌ನ ಇತ್ತೀಚಿನ ನಡೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಪರಮಾಣು ಒಪ್ಪಂದದ ಮರುಸ್ಥಾಪನೆಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ ಎಂದು ಅಮೆರಿಕ ಆರೋಪಿಸಿದೆ. ಅಲ್ಲದೆ, ಒಪ್ಪಂದ ಮಾಡಿಕೊಳ್ಳಲೇಬೇಕು ಎಂಬ ಆತುರ ನಮಗಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಈ ಮೊದಲು ಹೇಳಿದ್ದರು.

2015ರ ಜಂಟಿ ಸಮಗ್ರ ಕ್ರಿಯಾ ಯೋಜನೆಯ ಪ್ರಸ್ತಾವಿತ ಅಂತಿಮ ಟಿಪ್ಪಣಿಗೆ ಇರಾನ್ ಬಹುತೇಕ ಒಪ್ಪಿಗೆ ಸೂಚಿಸಿದ್ದರಿಂದ ಪರಮಾಣು ಮರುಸ್ಥಾಪನೆಯಲ್ಲಿ ಯುರೋಪಿಯನ್ ಮಧ್ಯವರ್ತಿಗಳು ಗಮನಾರ್ಹ ಮುನ್ನಡೆ ಸಾಧಿಸಿದ ಸೂಚನೆಯಿತ್ತು. ಆದರೆ ಈ ಟಿಪ್ಪಣಿಗೆ ಅಮೆರಿಕದ ಪ್ರತಿಕ್ರಿಯೆಯ ಬಳಿಕ ಇರಾನ್ ತನ್ನ ನಿಲುವಿನಿಂದ ಹಿಂದೆ ಸರಿದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. 

2015ರ ಪರಮಾಣು ಒಪ್ಪಂದ ಪುನರುಜ್ಜೀವನಗೊಳಿಸಲು ನಡೆಯುತ್ತಿರುವ ಮಾತುಕತೆಯನ್ನು ಅಮೆರಿಕ ವಿಳಂಬಿಸುತ್ತಿದೆ ಎಂದು ಇರಾನ್‌ ವಿದೇಶಾಂಗ ಇಲಾಖೆಯ ವಕ್ತಾರ ನಾಸೆರ್ ಕನ್ನಾನಿ ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್