ಈ ಜಗತ್ತು| ತನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದ ಇಮ್ರಾನ್‌ ಖಾನ್

  • ಬುದ್ಧ ಪೂರ್ಣಿಮೆ ದಿನದಂದು ನೇಪಾಳದ ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ
  •  ಶ್ರೀಲಂಕಾಕ್ಕೆ  4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿದ ಭಾರತ
Image

ಪಾಕಿಸ್ತಾನ

ತನ್ನ ಕೊಲೆಗೆ ಸಂಚು ಎಂದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ತನ್ನ ಕೊಲೆಗೆ ಸಂಚು ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಆತಂಕ ವ್ಯಕ್ತಪಡಿಸಿದ್ದಾರೆ. ಕೊಲೆಯಾದರೆ ಅಪರಾಧಿಗಳು ಯಾರು ಎಂಬುದು ಇತ್ತೀಚೆಗೆ ತಾನು ರೆಕಾರ್ಡ್‌ ಮಾಡಿ ಸುರಕ್ಷಿತ ಸ್ಥಳದಲ್ಲಿ ಇಟ್ಟಿರುವ ವಿಡಿಯೋ ಸಂದೇಶದಿಂದ ಜನರಿಗೆ ತಿಳಿಯಲಿದೆ ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ. ಪಂಜಾಬ್‌ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ನಡೆದ ರ‍್ಯಾಲಿ ವೇಳೆ ಮಾತನಾಡಿದ ಇಮ್ರಾನ್‌ ಖಾನ್‌, ಕೊಲೆಯ ಸಂಚಿನ ಬಗ್ಗೆ ಇತ್ತೀಚೆಗೆ ತಿಳಿದುಬಂದಿದೆ. ರಾಷ್ಟ್ರದ ಒಳಗೆ ಮತ್ತು ಹೊರಗೆ ರಹಸ್ಯವಾಗಿ ಸಂಚು ನಡೆದಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರ ಹೆಸರನ್ನು ವಿಡಿಯೋ ಸಂದೇಶದಲ್ಲಿ ದಾಖಲಿಸಿಟ್ಟಿದ್ದೇನೆ. ನನಗೆ ಏನಾದರೂ ಸಂಭವಿಸಿದರೆ ಜನರಿಗೆ ವಿಡಿಯೋ ಸಂದೇಶದ ಮೂಲಕ ಅಪರಾಧಿಗಳು ಯಾರು ಎಂಬುದು ತಿಳಿಯಲಿದೆ ಎಂದಿದ್ದಾರೆ.

'ರೆಕಾರ್ಡ್‌ ಮಾಡಲಾಗಿರುವ ವಿಡಿಯೋ ಸಂದೇಶವನ್ನು ಸುರಕ್ಷಿತವಾಗಿ ಇಡಲಾಗಿದೆ' ಎಂದು ಇಮ್ರಾನ್‌ ಹೇಳಿದ್ದಾರೆ. ತನ್ನ ನೇತೃತ್ವದ ಸರ್ಕಾರವನ್ನು ಪತನಗೊಳಿಸುವ ಸಂಚಿನಲ್ಲಿ ಅಮೆರಿಕದ ಪಾತ್ರವಿದೆ ಎಂದು ನಿರಂತರವಾಗಿ ಆಪಾದಿಸುತ್ತ ಬಂದಿರುವ ಇಮ್ರಾನ್‌, ಅಪರಾಧಿಗಳ ಕೈಗೆ ದೇಶದ ಚುಕ್ಕಾಣಿಯನ್ನು ಕೊಡುವ ಬದಲು ಅಣುಬಾಂಬ್‌ ಹಾಕುವುದು ಉತ್ತಮ ಎಂದಿದ್ದರು.

Image

ನೇಪಾಳ
ನೇಪಾಳಕ್ಕೆ ಭೇಟಿ ನೀಡಲಿರುವ ನರೇಂದ್ರ ಮೋದಿ

ನೇಪಾಳ-ಭಾರತದ ಸಂಬಂಧ ಮೊದಲಿನಿಂದಲೂ ಉತ್ತಮವಾಗಿದೆ. ಉಭಯ ರಾಷ್ಟ್ರಗಳ ನಡುವಿನ ನಾಗರಿಕತೆ ಮತ್ತು ಜನರ ಸಂಪರ್ಕವೇ ನಮ್ಮ ನಿಕಟ ಸಂಬಂಧದ ಸೌಧವನ್ನು ರೂಪಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬುದ್ಧ ಪೂರ್ಣಿಮೆಯ ಪ್ರಯುಕ್ತ ಸೋಮವಾರ ನೇಪಾಳದ ಲುಂಬಿನಿಗೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಕಳೆದ ತಿಂಗಳು ಭಾರತಕ್ಕೆ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಭೇಟಿ ನೀಡಿದ್ದರು. ಮತ್ತೊಮ್ಮೆ ಅವರನ್ನು ಭೇಟಿಯಾಗಲು ಉತ್ಸುಕನಾಗಿರುವೆ ಎಂದು ಮೋದಿ ತಿಳಿಸಿದ್ದಾರೆ. ಜಲ ವಿದ್ಯುತ್, ಪ್ರಗತಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ಪರಸ್ಪರ ಇನ್ನೂ ಮುಂದುವರಿಯಲಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
"ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನಾನು ಎದುರು ನೋಡುತ್ತಿದ್ದೇನೆ. ಭಗವಾನ್ ಬುದ್ಧನ ಜನ್ಮದ ಪವಿತ್ರ ಸ್ಥಳದಲ್ಲಿ ಲಕ್ಷಾಂತರ ಭಾರತೀಯರ ಹೆಜ್ಜೆ ಗುರುತುಗಳನ್ನು ಅನುಸರಿಸಲು ನನಗೆ ಗೌರವವಿದೆ. ಜೊತೆಗೆ ನಾನು 'ಲುಂಬಿನಿ ಮೊನಾಸ್ಟಿಕ್ ವಲಯ'ದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಅಂತಾರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲಿದ್ದೇನೆ" ಎಂದು ಮೋದಿ ತಿಳಿಸಿದ್ದಾರೆ.

Image

 
ಶ್ರೀಲಂಕಾ

ದ್ವೀಪರಾಷ್ಟ್ರಕ್ಕೆ 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿದ ಭಾರತ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾಕ್ಕೆ ಭಾರತವು 4 ಲಕ್ಷ ಮೆಟ್ರಿಕ್ ಟನ್ ಇಂಧನ ಕಳುಹಿಸಿಕೊಟ್ಟಿದೆ. ಈ ಕುರಿತು ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ‘ಶ್ರೀಲಂಕಾಕ್ಕೆ ಇತ್ತೀಚಿನ ಕೊಡುಗೆಯಾಗಿ 4 ಲಕ್ಷ ಮೆಟ್ರಿಕ್ ಟನ್ ಡೀಸೆಲ್ ಅನ್ನು ಭಾರತವು ಕಳುಹಿಸಿಕೊಟ್ಟಿದೆ. ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ ನೀಡಿರುವ (ಲೈನ್ ಆಫ್‌ ಕ್ರೆಡಿಟ್ ಅಥವಾ ಎಲ್‌ಒಸಿ) ಆಧಾರದಲ್ಲಿ ಇಂಧನ ಕಳುಹಿಸಿಕೊಡಲಾಗಿದೆ’ ಎಂದು ಹೈಕಮಿಷನ್ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.

"ಪ್ರಜಾಸತ್ತಾತ್ಮಕವಾಗಿ ರಚನೆಯಾದ ಶ್ರೀಲಂಕಾದ ಹೊಸ ಸರ್ಕಾರದೊಂದಿಗೆ ಕೆಲಸ ಮಾಡಲು ಭಾರತ ಎದುರು ನೋಡುತ್ತಿದೆ. ದ್ವೀಪ ರಾಷ್ಟ್ರದ ಜನರಿಗೆ ನವದೆಹಲಿಯ ಕಾಳಜಿ ಮತ್ತು ಬದ್ಧತೆ ಮುಂದುವರಿಯುತ್ತದೆ" ಎಂದು ಭಾರತೀಯ ಹೈಕಮಿಷನ್ ಗುರುವಾರ ತಿಳಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್