ಈ ಜಗತ್ತು | ಉತ್ತರ ಕೊರಿಯಾದಲ್ಲಿ ಹೊಸ ಸಾಂಕ್ರಾಮಿಕ ರೋಗ

  • ರಾಷ್ಟ್ರೀಯ ಭದ್ರತೆಗಾಗಿ ಬ್ರಿಕ್ಸ್ ದೇಶಗಳ ಸಹಮತ
  • ಕೊರಿಯಾದಲ್ಲಿ ಉದರಕ್ಕೆ ಸಂಬಂಧಿಸಿದ ಹೊಸ ರೋಗ
Image

ಕೊರಿಯಾ

ಹೆಸರಿಡದ ಹೊಸ ಸಾಂಕ್ರಾಮಿಕ ರೋಗ ಪತ್ತೆ

ಕೊರೋನಾ ಸೋಂಕು ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಉತ್ತರ ಕೊರಿಯಾದಲ್ಲಿ ಇದೀಗ ಉದರಕ್ಕೆ ಸಂಬಂಧಿಸಿದ ಹೊಸ ಸಾಂಕ್ರಾಮಿಕ ರೋಗವೊಂದು ಕಾಣಿಸಿಕೊಂಡಿದೆ. 

ನೈಋತ್ಯ ಹೇಜು ನಗರದಲ್ಲಿ ಉದರಕ್ಕೆ ಸಂಬಂಧಿಸಿದ ಈ ಹೊಸ ಸಾಂಕ್ರಾಮಿಕ ಕಂಡುಬಂದಿದ್ದು, ಎಷ್ಟು ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಈ ಹೊಸ ಸಾಂಕ್ರಾಮಿಕ ಕಾಯಿಲೆಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಕಲುಷಿತ ನೀರು ಅಥವಾ ಆಹಾರ ಸೇವನೆಯಿಂದ ಎದುರಾಗುವ ಟೈಫಾಯಿಡ್, ಅತಿಸಾರ ಮತ್ತು ಕಾಲರಾ ರೀತಿಯ ಸಮಸ್ಯೆಗಳು ಕಾಣಿಸಿಕೊಳುತ್ತವೆ ಎಂದು ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಕಳೆದ ಹಲವು ದಶಕಗಳಿಂದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ಇಲ್ಲದಿರುವ ಹಾಗೂ ನೀರಿನ ಶುಚಿ ಘಟಕಗಳ ಕೊರತೆ ಇರುವ ಉತ್ತರ ಕೊರಿಯಾದಲ್ಲಿ ಇಂಥ ಕಾಯಿಲೆಗಳು ಸಾಮಾನ್ಯವಾಗಿ ಆಗಾಗ ಹರಡುತ್ತಲೇ ಇರುತ್ತದೆ ಎಂದು ತಿಳಿದುಬಂದಿದೆ.

Image

ಶ್ರೀಲಂಕಾ

ಪೆಟ್ರೋಲ್‌ಗಾಗಿ ಭಾರತಕ್ಕೆ ಶ್ರೀಲಂಕಾ ಮನವಿ

ಹಣ ಪಾವತಿಸುವ ಬಗ್ಗೆ ಬ್ಯಾಂಕ್‌ ಖಾತರಿ (ಕ್ರೆಡಿಟ್‌ ಲೈನ್) ಆಧಾರದಲ್ಲಿ ಭಾರತದಿಂದ ಹೊಸದಾಗಿ ಪೆಟ್ರೋಲ್‌ ದೊರೆಯುವ ಬಗ್ಗೆ ಎದುರು ನೋಡುತ್ತಿರುವ ದ್ವೀಪ ರಾಷ್ಟ್ರ ಶ್ರೀಲಂಕಾ, ಇನ್ನು ಮೂರು ದಿನಗಳಲ್ಲಿ ದೇಶಕ್ಕೆ ಮತ್ತಷ್ಟು ಪೆಟ್ರೋಲ್‌ ಲಭ್ಯವಾಗಲಿದೆ ಎಂದು ನಾಗರಿಕರಿಗೆ ಭರವಸೆ ನೀಡಿದೆ.

‘ಮಿತಿ ಮೀರಿ ಬಾಕಿ ಉಳಿಸಿಕೊಂಡಿರುವುದರಿಂದ ಪೂರೈಕೆದಾರರಿಂದ ತೈಲ ಪಡೆಯಲು ನಾವು ಹೆಣಗಾಡುತ್ತಿದ್ದೇವೆ’ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನ ವಿಜೆಶೇಖರ ಸುದ್ದಿಗಾರರಿಗೆ ತಿಳಿಸಿದರು.

ತೀವ್ರ ಆರ್ಥಿಕ ಬಿಕ್ಕಟ್ಟು ಅನುಭವಿಸುತ್ತಿರುವ ಶ್ರೀಲಂಕಾ, ಇಂಧನಕ್ಕೆ ಹಣ ಪಾವತಿಸಲು ಒದ್ದಾಡುತ್ತಿದೆ. ನಾಗರಿಕರು ಪೆಟ್ರೋಕ್‌, ಡೀಸೆಲ್‌ ಸಿಗದೆ ಪರಿತಪಿಸುತ್ತಿದ್ದಾರೆ. ಪೆಟ್ರೋಲ್‌ ಪಂಪ್‌ಗಳ ಎದುರು ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲು ನಿಲ್ಲುವುದು ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.

ಈ ಮಧ್ಯೆ ಗುರುವಾರ, ಪೆಟ್ರೋಲ್‌ಗಾಗಿ ಸಾಲಿನಲ್ಲಿ ನಿಂತಿದ್ದ ಆಟೋ ಚಾಲಕರೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಬಗ್ಗೆ ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದೆ. ಭಾರತವು 500 ದಶಲಕ್ಷ ಡಾಲರ್‌ (₹3,904 ಕೋಟಿ) ಕ್ರೆಡಿಟ್‌ ಲೈನ್ ಆಧಾರದಲ್ಲಿ ಈವರೆಗೆ ಎರಡು ಬಾರಿ ಇಂಧನ ಪೂರೈಕೆ ಮಾಡಿ ಸ್ಪಂದಿಸಿದೆ. ಭಾರತದ ಕ್ರಮವನ್ನು ಚೀನಾ ಕೂಡಾ ಕೊಂಡಾಡಿದೆ.

Image

ಬ್ರಿಕ್ಸ್

ರಾಷ್ಟ್ರೀಯ ಭದ್ರತೆಗಾಗಿ ಬ್ರಿಕ್ಸ್ ದೇಶಗಳ ಸಹಮತ

ಬಹು ಪಕ್ಷೀಯತೆ, ಜಾಗತಿಕ ಆಡಳಿತಕ್ಕೆ ಬಲ ಮತ್ತು ರಾಷ್ಟ್ರೀಯ ಭದ್ರತೆಗೆ ಎದುರಾಗಲಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಹಿರಿಯ ಭದ್ರತಾ ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ವಿಚಾರಗಳಲ್ಲಿ ಬ್ರಿಕ್ಸ್ ದೇಶಗಳ ಭದ್ರತಾ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಬ್ರಿಕ್ಸ್(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ರಾಷ್ಟ್ರೀಯ ಭದ್ರತಾ ಸಲಹೆಗಾರರು ಮತ್ತು ರಾಷ್ಟ್ರೀಯ ಭದ್ರತಾ ಪ್ರತಿನಿಧಿಗಳ 12ನೇ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು. ‘ಯಾವುದೇ ರಾಜೀ ಇಲ್ಲದೆ, ಭಯೋತ್ಪಾದನೆ ವಿರುದ್ಧ ಎಲ್ಲರೂ ಸಹಕಾರ ನೀಡಬೇಕು’ ಎಂದು ದೋವಲ್ ಸಲಹೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್