
- ಚೀನಾದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಹೇರಿದ ಸರ್ಕಾರ
- ಕಿರುಕುಳ ಎದುರಿಸುತ್ತಿರುವ ಮಹಿಳಾ ಪತ್ರಕರ್ತೆಯರು

ಚೀನಾ
ಲಾಕ್ಡೌನ್ ವಿರುದ್ಧ ಪ್ರತಿಭಟನೆ
ಕಟ್ಟುನಿಟ್ಟಾದ ಕೋವಿಡ್ ಲಾಕ್ಡೌನ್ ನಿಯಮಗಳ ವಿರುದ್ಧ ಚೀನಾದ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಏಳು ನಾಗರಿಕರನ್ನು ಬಂಧಿಸಲಾಗಿದೆ ಎಂದು ಈಶಾನ್ಯ ಚೀನಾದ ಪೊಲೀಸರು ತಿಳಿಸಿದ್ದಾರೆ.
ಚೀನಾದಲ್ಲಿ ಸೋಮವಾರ 5,600 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ಆರು ತಿಂಗಳಲ್ಲೇ ವರದಿಯಾದ ಗರಿಷ್ಠ ಪ್ರಮಾಣದ ಪ್ರಕರಣಗಳಾಗಿವೆ. ಹೀಗಾಗಿ ರಾಷ್ಟ್ರದಾದ್ಯಂತ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಚೀನಾದ ನಾಗರಿಕರು ಸಾಲು, ಸಾಲು ಲಾಕ್ಡೌನ್ನಿಂದ ರೋಸಿ ಹೋಗಿದ್ದಾರೆ.

ಲಂಡನ್
ಮಹಿಳಾ ಪತ್ರಕರ್ತೆಯರಿಗೆ ನಿಂದನೆ ಹೆಚ್ಚಳ
ತಮ್ಮ ವೃತ್ತಿ ಜೀವನದಲ್ಲಿ ಬಹುಪಾಲು ಮಹಿಳಾ ಪತ್ರಕರ್ತರು ಯಾವುದಾದರೊಂದು ರೀತಿಯಲ್ಲಿ ಆನ್ಲೈನ್ ನಿಂದನೆ ಮತ್ತು ಬೆದರಿಕೆಯನ್ನು ಅನುಭವಿಸಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ಹೊಸ ವರದಿ ಹೇಳಿದೆ. ಜಗತ್ತಿನಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಇರುವ ಬೆದರಿಕೆಯನ್ನು ಈ ವರದಿ ತಿಳಿಸಿದೆ.
‘ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟ್ ಮತ್ತು ಶೆಫೀಲ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯನ್ನು ಆಧರಿಸಿದ ವರದಿಯು 15 ದೇಶಗಳ 1000ಕ್ಕೂ ಅಧಿಕ ಮಹಿಳಾ ಪತ್ರಕರ್ತರ ಪ್ರತಿಕ್ರಿಯೆಯನ್ನು ದಾಖಲಿಸಿಕೊಂಡಿದ್ದು ಜಾಗತಿಕವಾಗಿ ಸುಮಾರು 75%ದಷ್ಟು ಮಹಿಳಾ ಪತ್ರಕರ್ತರು ಆನ್ ಲೈನ್ ದ್ವೇಷ ಮತ್ತು ಬೆದರಿಕೆಗೆ ಒಳಗಾಗಿರುವುದನ್ನು ಬಹಿರಂಗ ಪಡಿಸಿದೆ.
25%ದಷ್ಟು ಜನರು ದೈಹಿಕ ಹಿಂಸಾಚಾರದ ಬೆದರಿಕೆಯನ್ನು ಸ್ವೀಕರಿಸಿರುವುದಾಗಿ, 18%ದಷ್ಟು ಜನರು ಲೈಂಗಿಕ ದೌರ್ಜನ್ಯದ ಬೆದರಿಕೆಗಳನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಕೆಲವು ಅನಗತ್ಯ ಜನತೆ ತಮಗೆ ಖಾಸಗಿ ಸಂದೇಶ ರವಾನಿಸುವ ಮೂಲಕ ಬೆದರಿಕೆ ಮತ್ತು ಕಿರುಕುಳ ನೀಡುತ್ತಿರುವುದಾಗಿ 48% ಜನರು ಹೇಳಿದ್ದಾರೆ.

ಪಾಕಿಸ್ತಾನ
ಇಮ್ರಾನ್ ದೇಶದ್ರೋಹ ಮಾಡುತ್ತಿದ್ದಾರೆ
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನದ ವಿರುದ್ಧ ದೇಶದ್ರೋಹ ಮಾಡುತ್ತಿದ್ದಾರೆ. ನ್ಯಾಯಾಂಗದಂತಹ ಸಂಸ್ಥೆಗಳು ತಮ್ಮ ಕೊಳಕು ಅಜೆಂಡಾ’ದ ಪರ ನಿಲ್ಲುವಂತೆ ಒತ್ತಾಯಿಸಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಆರೋಪಿಸಿದ್ದಾರೆ.
ಮರು ಚುನಾವಣೆಗೆ ಆಗ್ರಹಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷ ಆಯೋಜಿಸಿರುವ ಇಸ್ಲಾಮಾಬಾದ್ವರೆಗಿನ ದೀರ್ಘ ರ್ಯಾಲಿ ನವೆಂಬರ್ 8 ರಿಂದ ಪುನರಾರಂಭಗೊಂಡಿದೆ ಎಂದು ಪಕ್ಷದ ಮುಖಂಡರು ಘೋಷಿಸಿದ್ದಾರೆ.

ವಿಶ್ವಸಂಸ್ಥೆ
ಉಷ್ಣ ಹೊಡೆತಕ್ಕೆ ಕನಿಷ್ಠ 15 ಸಾವಿರ ಸಾವು
ಯೂರೋಪ್ನಲ್ಲಿ ಈ ವರ್ಷ ಉಷ್ಣ ಹೊಡೆತಕ್ಕೆ ಕನಿಷ್ಠ 15 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಸ್ಪೇನ್ ಮತ್ತು ಜರ್ಮನಿಯಲ್ಲಿ ಸಾವು - ನೋವುಗಳು ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಜೂನ್ನಿಂದ ಆಗಸ್ಟ್ವರೆಗಿನ ಮೂರು ತಿಂಗಳು ಯೂರೋಪ್ನಲ್ಲಿ ಇದುವರೆಗಿನ ಅತ್ಯಂತ ಉಷ್ಣದ ಅವಧಿಯಾಗಿತ್ತು. ಅತ್ಯಧಿಕ ಉಷ್ಣಾಂಶದಿಂದ ಇಡೀ ಖಂಡದಲ್ಲಿ ಭೀಕರ ಬರಗಾಲದ ಸಾಧ್ಯತೆಯಿದ್ದು, ಮಧ್ಯ ಪ್ರಾಚೀನ ಯುಗದ ಬಳಿಕ ಇದೇ ಅತ್ಯಂತ ಭೀಕರ ಬರಗಾಲವಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
"ದೇಶಗಳು ಇದುವರೆಗೆ ಸಲ್ಲಿಸಿದ ಅಂಕಿ ಅಂಶಗಳ ಪ್ರಕಾರ, ಬಿಸಿಗಾಳಿಯ ಪರಿಣಾಮವಾಗಿ 2022ರಲ್ಲಿ ಕನಿಷ್ಠ 15 ಸಾವಿರ ಮಂದಿ ಮೃತಪಟ್ಟಿದ್ದಾರೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹನ್ಸ್ ಕ್ಲೂಗ್ ಹೇಳಿದ್ದಾರೆ.
"ಕಳೆದ ಮೂರು ತಿಂಗಳ ಬೇಸಿಗೆಯಲ್ಲಿ ಸ್ಪೇನ್ನಲ್ಲಿ ಸುಮಾರು 4 ಸಾವಿರ, ಪೋರ್ಚ್ಗಲ್ನಲ್ಲಿ 1000, ಬ್ರಿಟನ್ನಲ್ಲಿ 3200 ಮಂದಿ ಹಾಗೂ ಜರ್ಮನಿಯಲ್ಲಿ 4500 ಮಂದಿ ಜೀವ ಕಳೆದುಕೊಂಡಿದ್ದಾರೆ" ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.