ಈ ಜಗತ್ತು | ಅಮೆರಿಕ ಡಾಲರ್‌ ಎದುರು ಕುಸಿದ ರಷ್ಯಾದ ರೂಬಲ್‌

  • ಎರಡು ತಿಂಗಳ ನಂತರ ಮೊದಲ ಬಾರಿಗೆ ರಷ್ಯಾದ ರೂಬಲ್ ಕುಸಿತ
  • ಒಗ್ಗೂಡಿ ಪಾಕಿಸ್ತಾನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕಾಗಿದೆ
Image

ಉಕ್ರೇನ್‌ನಲ್ಲಿ ಪೂರ್ಣಪ್ರಮಾಣದ ಸೇನೆಯನ್ನು ಪುಟಿನ್‌ ಸಜ್ಜಗೊಳಿಸಲು ಆದೇಶಿಸಿದ ನಂತರ ರಷ್ಯಾದ ಕರೆನ್ಸಿಯಾದ ರೂಬಲ್‌ ಅಮೆರಿಕ ಡಾಲರ್‌ ಎದುರು ಕುಸಿದಿದೆ. ಸುಮಾರು ಎರಡು ತಿಂಗಳ ನಂತರ ಮೊದಲ ಬಾರಿಗೆ ರಷ್ಯಾದ ರೂಬಲ್ ಕುಸಿದಿದ್ದು, ಈ ಮೊದಲು ಅಮೆರಿಕದ ಒಂದು ಡಾಲರ್‌ಗೆ 61.97 ರೂಬಲ್‌ ಆಗಿತ್ತು. ಪ್ರಸ್ತುತ ಆ ಮೌಲ್ಯವು ಶೇ. 1.5ರಷ್ಟು ಹೆಚ್ಚಾಗಿದೆ. ಈಗ ಒಂದು ಡಾಲರ್‌ಗೆ 62.97 ರೂಬಲ್‌ ಆಗಿದೆ. ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯಿದ್ದರೆ, ನಮ್ಮ ನಾಗರಿಕರನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸುತ್ತೇವೆ" ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ದೂರದರ್ಶನದ ಭಾಷಣ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

Image

ಕುರ್ದಿಸ್ತಾನ್‌

ಗುಂಡಿನ ದಾಳಿಗೆ ಐವರು ಮಹಿಳೆಯರ ಸಾವು

ಹಿಜಾಬ್‌ ವಿರುದ್ಧವಾಗಿ ಇರಾನ್‌ನ ಕುರ್ದಿಸ್ತಾನ್‌ ಪ್ರದೇಶದಲ್ಲಿ ಸುಮಾರು 500 ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಈ ಸಂದರ್ಭದಲ್ಲಿ ಕಾರುಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಇದಕ್ಕೂ ಮೊದಲು ಕೆಲವು ಮಹಿಳೆಯರು ಕೂದಲು ಕತ್ತರಿಸಿಕೊಂಡು, ಹಿಜಾಬ್‌ಗೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪ್ರತಿಭಟನಾ ನಿರತ ಮಹಿಳೆಯರ ಮೇಲೆ ಇರಾನ್ ಭದ್ರತಾ ಪಡೆ ಗುಂಡು ಹಾರಿಸಿದ ಪರಿಣಾಮ ಐವರು ಸಾವನ್ನಪ್ಪಿರುವುದಾಗಿ 'ರಾಯಿಟರ್ಸ್' ವರದಿ ಉಲ್ಲೇಖಿಸಿದೆ. ಇರಾನ್‌ನಲ್ಲಿ ಮಹಿಳೆಯರು ವಸ್ತ್ರ ಸಂಹಿತೆಯನ್ನು ಉಲ್ಲಂಘಿಸುವುದು ಕಾನೂನು ಪ್ರಕಾರ ಅಪರಾಧ ಎಂದು ಟೆಹ್ರಾನ್ ಪೊಲೀಸ್ ವರಿಷ್ಠಾಧಿಕಾರಿ ಹುಸೈನ್ ರಹಿಮಿ ತಿಳಿಸಿದ್ದಾರೆ.

ಮೆಹ್ಸಾ ಘಟನೆಗೆ ಯುರೋಪಿಯನ್ ಒಕ್ಕೂಟ, ಫ್ರಾನ್ಸ್ ಸೇರಿದಂತೆ ಹಲವು ದೇಶಗಳು ತೀವ್ರವಾಗಿ ಖಂಡಿಸಿದ್ದು, ಇರಾನ್ ಅಧಿಕಾರಿಗಳು ದೇಶದ ಪ್ರಜೆಗಳ ಹಕ್ಕುಗಳನ್ನು ಗೌರವಿಸಬೇಕು ಎಂದು ಒತ್ತಾಯಿಸಿವೆ.

Image

ಚೀನಾ

2.29 ಕೋಟಿ ಹಣದಿಂದ ಬಾಹ್ಯಾಕಾಶಕ್ಕೆ ಪ್ರವೇಶ 

2025ರ ವೇಳೆಗೆ ಬಾಹ್ಯಾಕಾಶಕ್ಕೆ ಪ್ರವಾಸಿ ವಿಮಾನಗಳನ್ನು ಆರಂಭಿಸಲು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ನಿರ್ಧರಿಸಿದೆ. ಬಾಹ್ಯಾಕಾಶ ಪ್ರವಾಸಕ್ಕೆ ಪ್ರತಿ ಪ್ರಯಾಣಿಕನಿಗೆ 2,87,200 ಡಾಲರ್‌ನಿಂದ 4,30,800 ಡಾಲರ್‌ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

“ಬಾಹ್ಯಾಕಾಶ ಪ್ರವಾಸದ ಸಂದರ್ಭದಲ್ಲಿ ವಿಮಾನಗಳು ಪ್ರಯಾಣಿಕರನ್ನು ಭೂಮಿಯ ಮೇಲ್ಮೈ ಹೊರಗಿನ ಕರ್ಮನ್‌ ಲೈನ್‌ವರೆಗೆ ಕರೆದುಕೊಂಡು ಹೋಗಿ, ಮರಳಲಿದೆ. ಭೂಮಿಯಿಂದ 100 ಕಿಮೀ ಎತ್ತರದಲ್ಲಿರುವ ಕರ್ಮನ್‌ ಲೈನ್‌ ಅನ್ನು ಬಾಹ್ಯಾಕಾಶದ ಆರಂಭ ಎಂದು ಪರಿಗಣಿಸಲಾಗುತ್ತದೆ," ಎಂದು ಬೀಜಿಂಗ್‌ ಮೂಲದ ರಾಕೆಟ್‌ ಕಂಪನಿ ಸಿಎಎಸ್‌ ಸ್ಪೇಸ್‌ ಸಂಸ್ಥಾಪಕ, ಹಿರಿಯ ರಾಕೆಟ್‌ ವಿಜ್ಞಾನಿ ಯಾಂಗ್‌ ಯಿಕಿಯಾಂಗ್‌ ಮಾಹಿತಿ ನೀಡಿದರು.

Image

ಪಾಕಿಸ್ತಾನ

1.60 ಕೋಟಿ ಮಂದಿ ಮಕ್ಕಳು ನಿರಾಶ್ರಿತ

ಪಾಕಿಸ್ತಾನದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಮೂರು ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳಿಗಾಗಿ ತಾನು ಕೋರಿದ ಧನಸಹಾಯವು ಯುಎಸ್‌ಡಿ 39 ಮಿಲಿಯನ್‌ನ ಮೂರನೇ ಒಂದು ಭಾಗಕ್ಕಿಂತಲೂ ಕಡಿಮೆ ಎಂದು ವಿಶ್ವಸಂಸ್ಥೆಯ ಇಂಟರ್‌ನ್ಯಾಷನಲ್ ಚಿಲ್ಡ್ರನ್ಸ್ ಎಮರ್ಜೆನ್ಸಿ ಫಂಡ್ (ಯುಎನ್‌ಐಸಿಫ್‌) ವಿಷಾಧಿಸಿದೆ.

"ಜಗತ್ತು ಒಗ್ಗೂಡಿ ಪಾಕಿಸ್ತಾನದಲ್ಲಿರುವ ಮಕ್ಕಳಿಗೆ ಸಹಾಯ ಮಾಡಬೇಕಾಗಿದೆ. ಪಾಕಿಸ್ತಾನದ ಪ್ರತಿಯೊಬ್ಬ ಮಗುವಿಗೆ ಜೀವ ಉಳಿಸುವ ಆರೋಗ್ಯ, ಪೋಷಣೆ ಮತ್ತು ಶಿಕ್ಷಣ ಸೇವೆಗಳನ್ನು ತಲುಪಿಸುವ ಮೂಲಕ ನಾವು ಒಟ್ಟಾಗಿ ಜೀವಗಳನ್ನು ಉಳಿಸಬಹುದು" ಎಂದು ಮಂಗಳವಾರ ಜಿನೀವಾದಲ್ಲಿ ಯುಎನ್‌ಐಸಿಫ್‌ ಹೇಳಿದೆ.

ಭೀಕರ ಪ್ರವಾಹದಿಂದಾಗಿ ಸುಮಾರು 1.60 ಕೋಟಿ ಮಂದಿ ಮಕ್ಕಳು ನಿರಾಶ್ರಿತರಾಗಿದ್ದು, 30.40 ಲಕ್ಷ ಮಕ್ಕಳು ಪ್ರಾಣಾಪಾಯದಲ್ಲಿದ್ದಾರೆ. ತುರ್ತಾಗಿ ಆ ಮಕ್ಕಳಿಗೆ ನೆರವಿನ ಅಗತ್ಯವಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಪ್ರವಾಹದಿಂದಾಗಿ ಆತಂತ್ರವಾದ ಪ್ರದೇಶಗಳ ಪರಿಸ್ಥಿತಿ ಶೋಚನೀಯವಾಗಿದ್ದು, ಲಕ್ಷಾಂತರ ಮಕ್ಕಳು ಅತಿಸಾರ, ಡೆಂಗ್ಯೂ ಹಾಗೂ ಯಾತನಕಾರಿ ಚರ್ಮ ರೋಗಗಳಿಗೆ ತುತ್ತಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ನಿಧಿ (ಯುನಿಸೆಫ್) ಸಂಸ್ಥೆಯ ಪ್ರತಿನಿಧಿ ಅಬ್ದುಲ್ಲಾ ಫಾದಿಲ್ ತಿಳಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್