
- ಜಂಟಿ ಸೇನಾ ಸಮರಾಭ್ಯಾಸ ಬಹಿರಂಗ ಪ್ರಚೋದನೆ
- ಮಾಧ್ಯಮಗಳೊಂದಿಗೆ ಮಾತನಾಡಿದ ಇಮ್ರಾನ್ ಖಾನ್

ಈಜಿಪ್ತ್
ಒಗ್ಗಟ್ಟು ಪ್ರದರ್ಶಿಸಬೇಕು ಅಥವಾ ನಾಶವಾಗಬೇಕು
ಹವಾಮಾನ ಬದಲಾವಣೆಯ ವೇಗವರ್ಧಿತ ಪರಿಣಾಮಗಳನ್ನು ಎದುರಿಸುವಲ್ಲಿ ಮಾನವ ಕುಲವು ಒಗ್ಗಟ್ಟನ್ನು ಪ್ರದರ್ಶಿಸಿ ಸಹಕರಿಸಬೇಕು ಅಥವಾ ನಾಶವಾಗಬೇಕು, ಬೇರೆ ಆಯ್ಕೆಯೇ ಇಲ್ಲ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಜಾಗತಿಕ ತಾಪಮಾನ ತಡೆಗಟ್ಟುವ ನಿಟ್ಟಿನಲ್ಲಿ ಈಜಿಪ್ತ್ನಲ್ಲಿ ನಡೆಯುತ್ತಿರುವ ಜಾಗತಿಕ ಮುಖಂಡರ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ನಾವು ಹವಾಮಾನ ನರಕಕ್ಕೆ ಹೋಗುವ ಹೆದ್ದಾರಿಯಲ್ಲಿ ಆಕ್ಸಿಲೇಟರ್ ಮೇಲೆ ನಮ್ಮ ಪಾದವನ್ನು ಒತ್ತಿಹಿಡಿದು ಮುಂದಕ್ಕೆ ಧಾವಿಸುತ್ತಿದ್ದೇವೆ. ಕೋವಿಡ್ ಸಾಂಕ್ರಾಮಿಕದಿಂದ ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣದವರೆಗೆ, ಹವಾಮಾನ ವೈಪರೀತ್ಯದವರೆಗಿನ ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಸರಮಾಲೆಯು ಅರ್ಥವ್ಯವಸ್ಥೆಯನ್ನು ಜರ್ಜರಿತಗೊಳಿಸಿದೆ ಮತ್ತು ಅಂತಾರಾಷ್ಟ್ರೀಯ ಸಂಬಂಧವನ್ನು ಅಲುಗಾಡಿಸಿದೆ ಎಂದವರು ಎಚ್ಚರಿಸಿದ್ದಾರೆ.

ದಕ್ಷಿಣ ಕೊರಿಯ
ಜಂಟಿ ಸಮರಭ್ಯಾಸ ಪ್ರಚೋದನೆ
ಅಮೆರಿಕ- ದಕ್ಷಿಣ ಕೊರಿಯ ನಡೆಯುತ್ತಿರುವ ಜಂಟಿ ಸೇನಾ ಸಮರಾಭ್ಯಾಸ ಬಹಿರಂಗ ಪ್ರಚೋದನೆಯಾಗಿದ್ದು, ಇದಕ್ಕೆ ತನ್ನ ಪ್ರತಿಕ್ರಿಯೆ ದೃಢ ನಿಶ್ಚಯದಿಂದ ಕೂಡಿರುತ್ತದೆ ಎಂದು ಉತ್ತರ ಕೊರಿಯದ ಸೇನೆ ಸೋಮವಾರ ಎಚ್ಚರಿಸಿದೆ.
ಅಮೆರಿಕ ಮತ್ತು ದಕ್ಷಿಣ ಕೊರಿಯದ ಸೇನೆ ಕೊರಿಯ ಪರ್ಯಾಯ ದ್ವೀಪದಲ್ಲಿ ನಡೆಸುತ್ತಿರುವ ಜಂಟಿ ಸಮರಾಭ್ಯಾಸವು ಉದ್ದೇಶಪೂರ್ವಕವಾಗಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಉತ್ತರ ಕೊರಿಯವನ್ನು ನೇರವಾಗಿ ಗುರಿಯಾಗಿಸಿದ ಅತ್ಯಂತ ಆಕ್ರಮಣಕಾರಿ ರೀತಿಯ ಅಪಾಯಕಾರಿ ಸಮರಾಭ್ಯಾಸ. ಇದಕ್ಕೆ ಸದೃಢ ಮತ್ತು ಬಲಿಷ್ಟ ರೀತಿಯಲ್ಲಿ ಉತ್ತರ ನೀಡಲಾಗುವುದು ಎಂದು ಕೊರಿಯನ್ ಪೀಪಲ್ಸ್ ಆರ್ಮಿ (ಉತ್ತರ ಕೊರಿಯಾ ಸೇನೆ)ಯ ಮುಖ್ಯಸ್ಥರನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ 'ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ' (ಕೆಸಿಎನ್ಎ) ವರದಿ ಮಾಡಿದೆ.

ನೇಪಾಳ
ಸಾರ್ವತ್ರಿಕ ಚುನಾವಣೆ
ನೇಪಾಳದ ಸಂಸತ್ತು ಮತ್ತು ಪ್ರಾಂತೀಯ ವಿಧಾನಸಭೆಗಳಿಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ ಎಂದು ನೇಪಾಳದ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿ ದಿನೇಶ್ ಕುಮಾರ್ ಥಪಾಲಿಯಾ ತಿಳಿಸಿದ್ದಾರೆ.
ನೇಪಾಳದಾದ್ಯಂತ 7 ಪ್ರಾಂತ್ಯ ಸೇರಿ ಒಟ್ಟು 1.7 ಕೋಟಿಗೂ ಹೆಚ್ಚು ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ. 275 ಫೆಡರಲ್ ಪಾರ್ಲಿಮೆಂಟ್ ಸದಸ್ಯರಲ್ಲಿ 165 ಸದಸ್ಯರು ನೇರ ಮತದಾನದಿಂದ ಆಯ್ಕೆಯಾಗಲಿದ್ದು, ಉಳಿದ 110 ಸ್ಥಾನಗಳಿಗೆ ಅನುಪಾತದ ಆಧಾರದಲ್ಲಿ ಆಯ್ಕೆ ನಡೆಯಲಿದೆ. 550 ಪ್ರಾಂತೀಯ ಸಭೆಯಲ್ಲಿ 330 ಸ್ಥಾನ ನೇರ ಮತದಾನದ ಮೂಲಕವೂ, 220 ಸ್ಥಾನಕ್ಕೆ ಅನುಪಾತದ ಆಧಾರದಲ್ಲೂ ಆಯ್ಕೆ ನಡೆಯಲಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ
ಕಾಲಿನಿಂದ ಮೂರು ಗುಂಡುಗಳು ಹೊರಗೆ
ಪಾಕಿಸ್ತಾನದ ಪಂಜಾಬ್ನ ವಜೀರಾಬಾದ್ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಕಳೆದ ವಾರ ಗುಂಡಿನ ದಾಳಿ ನಡೆದಿತ್ತು. ಹತ್ಯಾ ಯತ್ನದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಂಡಿನ ದಾಳಿಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಇಮ್ರಾನ್ ಖಾನ್, ತಮ್ಮ ಬಲಗಾಲಿನಿಂದ ಮೂರು ಗುಂಡುಗಳನ್ನು ಹೊರತೆಗೆಯಲಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥರು ಆಗಿರುವ ಇಮ್ರಾನ್ ಖಾನ್, ಲಾಹೋರ್ನ ಜಮಾನ್ ಪಾರ್ಕ್ನಲ್ಲಿರುವ ತಮ್ಮ ನಿವಾಸದಲ್ಲಿ 'ಸಿಎನ್ಎನ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.